ರಾಯಚೂರು | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಕೆಲ ದೋಷ ಹಿನ್ನೆಲೆ ಹೆಚ್ಚಿನ ಸಮಯಾವಕಾಶ ನೀಡಲು ಮಾಜಿ ಸಚಿವ ಒತ್ತಾಯ

ರಾಯಚೂರು : ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಸಾಕಷ್ಟು ದೋಷಗಳಿದ್ದು ಜೊತೆಗೆ ಸಮಯಾವಕಾಶ ಅತಿ ಕಡಿಮೆ ಇರುವುದರಿಂದ ಸಮೀಕ್ಷೆ ಗೊಂದಲಕಾರಿ ಆಗುವ ಆತಂಕವಿದೆ ಎಂದು ಮಾಜಿ ಸಚಿವ ಹಾಗೂ ಆದಿ ಜಾಂಬವ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ ಆಲ್ಕೋಡ್ ಎಚ್ಚರಿಸಿದರು.
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆಗೆ ಕೇವಲ 15 ದಿನಗಳನ್ನು ನಿಗದಿಪಡಿಸಿರುವುದು ಸರ್ಕಾರದಲ್ಲಿ ಪ್ರಬುದ್ಧರಿಲ್ಲವೆಂಬ ಅನುಮಾನ ಮೂಡಿಸುತ್ತದೆ. ಇಷ್ಟು ಕಡಿಮೆ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ಜೊತೆಗೆ ಸರ್ವರ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಸಮೀಕ್ಷೆ ಮುಂದೂಡುವ ಸಾಧ್ಯತೆ ಇದೆ. ಸರ್ಕಾರ ಕ್ರಮಬದ್ಧವಾಗಿ ಸಮೀಕ್ಷೆ ನಡೆಸಬೇಕು ಎಂದರು.
ಕೆಲವು ಗ್ರಾಮ, ವಾರ್ಡ್‌ಗಳಲ್ಲಿ ಈವರೆಗೂ ಗಣತಿದಾರರು ತೆರಳಿಲ್ಲ ಎಂಬ ಆರೋಪಗಳಿವೆ. ಜೊತೆಗೆ, ಸರ್ಕಾರ ನೀಡಿರುವ ಮನೆಗಳ ಮಾಹಿತಿಯ ಪ್ರಕಾರ ಗಣತಿದಾರರು ಹೋದಾಗ ಅಲ್ಲಿ ಮನೆಗಳೇ ಇಲ್ಲದ ಘಟನೆಗಳು ಬೆಳಕಿಗೆ ಬಂದಿವೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಒಳಮೀಸಲಾತಿ ಜಾರಿಗಾಗಿ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗದ ವರದಿಯನ್ನು ಕಸದ ಬುಟ್ಟಿಗೆ ಎಸೆದು, ಸಚಿವ ಸಂಪುಟ ತೀರ್ಮಾನವನ್ನು ಅಂತಿಮಗೊಳಿಸುವ ಮೂಲಕ ಅಗೌರವ ತೋರಿದರು. ಇದೇ ರೀತಿಯಲ್ಲಿ ಪ್ರಸ್ತುತ ಸಮೀಕ್ಷೆಯೂ ಒಳಮೀಸಲಾತಿ ವರದಿಯಂತೆ ಆಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾದಿಗ ಸಮುದಾಯದವರು ಧರ್ಮದ ಕಾಲಂನಲ್ಲಿ “ಹಿಂದೂ” ಹಾಗೂ ಜಾತಿ ಕಾಲಂನಲ್ಲಿ “ಮಾದಿಗ” ಎಂದು ದಾಖಲಿಸಬೇಕು. ಯಾವುದೇ ಗೊಂದಲಗಳಿಗೆ ಒಳಗಾಗದೇ ನಿಖರ ಮಾಹಿತಿಯನ್ನು ಒದಗಿಸಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳು ಮತ್ತು ವಿದ್ಯಾವಂತ ಯುವಕರು ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ವೇಳೆ ಎಂ.ವಿರುಪಾಕ್ಷಿ, ನರಸಪ್ಪ, ಎನ್. ಮಹಾವೀರ, ರವಿಕುಮಾರ, ರಾಜು.ಎಸ್, ರಾಮು, ರಮೇಶ್, ತಿಪ್ಪಣ್ಣ, ಖಾಜಪ್ಪ ಸೇರಿದಂತೆ ಪ್ರಮುಖರು ಹಾಜರಿದ್ದರು.







