ರಾಯಚೂರು| ಹಗಲಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಯಲಿ, ಡಿ.ಜೆ ಯನ್ನು ಕೈಬಿಡಲಿ: ಮಾಜಿ ಶಾಸಕ ಎ.ಪಾಪಾರೆಡ್ಡಿ

ರಾಯಚೂರು: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಅವಘಡಗಳು, ಜೀವ ಬಲಿಗಳು ನಡೆಯುತ್ತಿದ್ದು ರಾತ್ರಿ ಮೆರವಣಿಗೆ ನಡೆಸುವುದನ್ನು ನಿಲ್ಲಿಸಿ ಹಗಲಿನಲ್ಲಿಯೇ ಅದ್ದೂರಿ ವಿಸರ್ಜನೆಗೆ ಎಲ್ಲಾ ಗಜಾನನ ಮಂಡಳಿಗಳು ಮುಂದಾಗಬೇಕೆಂದು ಮಾಜಿ ಶಾಸಕ ಎ.ಪಾಪಾರೆಡ್ಡಿ ಮನವಿ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಎ.ಪಾಪಾರೆಡ್ಡಿ, ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ರಾಯಚೂರಿನ ಜಹಿರಾಬಾದ್ ಬಡಾವಣೆಯಲ್ಲಿ ಇಬ್ಬರು ಬಾಲಕರು ಟ್ರಾಕ್ಟರ್ ಪಲ್ಟಿಯಾಗಿ ಅವಘಡದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಗಣೇಶ ಪ್ರತಿಷ್ಟಾಪನೆ ಮೊದಲನೇ ದಿನ ಸಿರವಾರದಲ್ಲಿಯೂ ವಿದ್ಯುತ್ ಅವಘಡದಿಂದ ಯುವಕ ಸಾವನ್ನಪ್ಪಿದ್ದಾನೆ ಎಂದರು.
ಡಿ.ಜೆ ಯಿಂದ ಚಿಕ್ಕ ಮಕ್ಕಳಿಗೆ, ವಯೋ ವೃದ್ಧರಿಗೆ ಸಮಸ್ಯೆಯಾಗುತ್ತಿದೆ. ಶಬ್ದ ಮಾಲಿನ್ಯದಿಂದ ಎಲ್ಲರಿಗೂ ಕಷ್ಟವಾಗಿದೆ. ರಾತ್ರಿ ವೇಳೆ ಗಣೇಶ ಮೆರವಣಿಗೆ ನಡೆಯುವುದರಿಂದ ಗಣೇಶ ಉತ್ಸವದ ಸಂಭ್ರಮ ಜನರು ನೋಡಲು ಸಾಧ್ಯವಾಗುತ್ತಿಲ್ಲ. ರಾತ್ರಿ ವೇಳೆಯಲ್ಲಿ ನಡೆಯುವ ಮೆರವಣಿಗೆ ಕೇವಲ ಡಿಜೆ ಕುಣಿತಕ್ಕೆ ಸೀಮಿತವಾಗಿದೆ. ಹಬ್ಬವನ್ನು ಸಡಗರದಿಂದ ಆಚರಿಸಿ ಜನರು ವೀಕ್ಷಿಸುವಂತಾಗಬೇಕು. ಹೈದರಾಬಾದ್ ಸೇರಿದಂತೆ ಅನೇಕ ಕಡೆಗಳಲ್ಲಿ ಸಂಜೆಯೇ ಆಕರ್ಷಕ ಮೆರವಣಿಗೆ ನಡೆಸಿ ಸಂಭ್ರಮಿಸಲಾಗುತ್ತಿದೆ. ಅದೇ ರೀತಿ ರಾಯಚೂರ ಜಿಲ್ಲೆಯಲ್ಲಿಯೂ ಹಗಲಿನಲ್ಲಿ ಸಕಲ ವಾಧ್ಯಗಳು, ಜಾನಪದ ತಲಾತಂಡಗಳು, ಸಾಮೂಹಿಕ ನೃತ್ಯ ಸೇರಿ ಸಂಬ್ರಮದಿಂದ ಆಚರಿಸುವುದನ್ನು ರೂಢಿಸಿಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಗಧಾರ ಬೆಟ್ಟಪ್ಪ, ಆಂಜಿನೇಯ್ಯ ಕಡಗೋಳು, ರಾಜಕುಮಾರ, ಬಿ.ಗೋವಿಂದ, ಬಂಗಿ ನರಸರೆಡ್ಡಿ, ನರಸಪ್ಪ ಯಕ್ಲಾಸಪುರು, ನರಸರೆಡಿ ಗುಡ್ಡಿ, ಪ್ರತಾಪರೆಡ್ಡಿ, ಬಸವರಾಜ, ಬಾಬುರಾವ್ ಇದ್ದರು.






