ರಾಯಚೂರು | ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ: ಸದುಪಯೋಗಕ್ಕೆ ಜಿಲ್ಲಾಧಿಕಾರಿಗಳ ಮನವಿ

ಸಾಂದರ್ಭಿಕ ಚಿತ್ರ
ರಾಯಚೂರು : ರಾಯಚೂರ ಜಿಲ್ಲಾಡಳಿತವು ಮಹಾನಗರ ಪಾಲಿಕೆ ಮತ್ತು ಇನ್ನೀತರ ಇಲಾಖೆಗಳ ಸಹಯೋಗದೊಂದಿಗೆ 30 ದಿನಗಳ ಕಾಲ ರಾಯಚೂರ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಹಮ್ಮಿಕೊಂಡಿರುವ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯ ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.
ಅತ್ಯುನ್ನತ ಐಎಎಸ್, ಐಪಿಎಸ್, ಐಆರ್ಎಸ್, ಕೆಎಎಸ್ ಪರೀಕ್ಷೆಗಳು ಸೇರಿದಂತೆ ಎಫ್ ಡಿಎ, ಎಸ್ ಡಿಎ, ಪೊಲೀಸ್, ಎಲ್ಲ ಬಗೆಯ ಗ್ರೂಪ್ ಸಿ ಪರೀಕ್ಷೆ ಸೇರಿದಂತೆ ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕು ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಹಂಬಲವಾಗಿರುತ್ತದೆ. ಆದರೆ, ಸೂಕ್ತ ಮಾರ್ಗದರ್ಶನ ಕೊರತೆಯಿಂದ ಕೆಲ ವಿದ್ಯಾರ್ಥಿಗಳು ವಿಫಲರಾಗುತ್ತಾರೆ. ರಾಯಚೂರು ಜಿಲ್ಲೆಯಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು. ಈ ಭಾಗದ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿರಬೇಕು, ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡಬೇಕು ಎಂದು ಯೋಚಿಸಿ ರಾಯಚೂರು ಜಿಲ್ಲೆಯಲ್ಲಿ ಈ ತರಬೇತಿ ಆಯೋಜನೆ ಮಾಡಲಾಗಿದ್ದು, ಈ ಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದ್ದಾರೆ.
ಈ ಉಚಿತ ತರಬೇತಿಯ ಅರ್ಹತಾ ಪರೀಕ್ಷೆಯು ನ.12ರಂದು ಮಧ್ಯಾಹ್ನ 3 ರಿಂದ 4.30ರವರೆಗೆ ರಾಯಚೂರಿನ ಜಿಲ್ಲಾ ರಂಗಮಂದಿರ ಹತ್ತಿರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಈ ಅರ್ಹತಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಮೊದಲ 100 ಅಭ್ಯರ್ಥಿಗಳಿಗೆ ಮಾತ್ರ ಈ ಉಚಿತ ತರಬೇತಿಗೆ ಅವಕಾಶ ನೀಡಲಾಗುವುದು. ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನ.8ರವರೆಗೆ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಪಿಯುಸಿ ಪಾಸಾದ ಹಾಗೂ ಪದವಿ ಓದುತ್ತಿರುವ ಅಥವಾ ಪದವಿ ಪೂರ್ಣಗೊಳಿಸಿದ ರಾಯಚೂರು ಸೇರಿದಂತೆ ರಾಜ್ಯದ ಯಾವುದೇ ಭಾಗದ ಆಸಕ್ತ ವಿದ್ಯಾರ್ಥಿಗಳು ಕ್ಯುಆರ್ ಕೋಡ್ ಬಳಸಿ ಹೆಸರು ನೋಂದಣಿ ಮಾಡಬಹುದಾಗಿದೆ. ಈ ತರಬೇತಿಯು ಜಿಲ್ಲಾ ರಂಗಮಂದಿರದ ಹಿಂದಿನ ಜಿಲ್ಲಾ ಕೇಂದ್ರ ಗ್ರಂಥಾಲಯದ ಹೊಸ ಕಟ್ಟಡದಲ್ಲಿ 30 ದಿನಗಳ ಕಾಲ ನಡೆಯಲಿದೆ. ಈ ತರಬೇತಿಗೆ ಯಾವುದೇ ಪ್ರವೇಶಾತಿ ಮತ್ತು ತರಬೇತಿ ಶುಲ್ಕ ಇರುವುದಿಲ್ಲ. ಈ ತರಬೇತಿ ಅವಧಿಯಲ್ಲಿ ಅರ್ಥಶಾಸ್ತ್ರ, ಭೌಗೋಳ ಶಾಸ್ತ್ರ, ಪರಿಸರ ಅಧ್ಯಯನ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾನಸಿಕ ಸಾಮರ್ಥ್ಯ, ಭಾರತ ಸಂವಿಧಾನ, ಇತಿಹಾಸ ಸೇರಿದಂತೆ ಹಲವು ವಿಷಯಗಳ ಪಾಠ ಬೋಧನೆಯು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನಡೆಯಲಿದೆ.
ಹೆಸರು ನೋಂದಣಿ, ಅರ್ಹತಾ ಪರೀಕ್ಷೆ, ತರಬೇತಿಯ ವಿಷಯಗಳು ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಉಚಿತ ತರಬೇತಿ ಕಾರ್ಯಕ್ರಮದ ನೋಡಲ್ ಅಧಿಕಾರಿಗಳು ಆಗಿರುವ ತಹಶೀಲ್ದಾರರಾದ ಸುರೇಶ ವರ್ಮಾ ಮೊ.,8660832180, ಅಮರೇಶ ಬಿರಾದಾರ ಮೊ:9886651314, ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರವೀಣಕುಮಾರ ಮೊ:8951683988 ಇವರಿಗೆ ಸಂಪರ್ಕಿಸಬಹುದಾಗಿದೆ.
ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ರಂಗಮಂದಿರ ಹಿಂದುಗಡೆಯ ಜಿಲ್ಲಾ ಗ್ರಂಥಾಲಯದ ಕಚೇರಿಯನ್ನು ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.







