Raichur | ಮಳೆಗಾಗಿ ಮಕ್ತಲಪೇಟೆಯಲ್ಲಿ ಕಪ್ಪೆಗಳ ಮದುವೆ

ರಾಯಚೂರು: ಮುಂಗಾರು ಆರಂಭವಾದರೂ ಸಮರ್ಪಕ ಮಳೆ ಸುರಿಯದ ಹಿನ್ನೆಲೆಯಲ್ಲಿ ವರುಣ ದೇವರ ಕೃಪೆಗಾಗಿ ನಗರದ ಮಕ್ತಲ್‌ಪೇಟೆಯಲ್ಲಿ ಕಪ್ಪೆಗಳಿಗೆ ಮದುವೆ ಮಾಡಿಸಿ, ಡೋಣಿ ಪೂಜೆ ಹಾಗೂ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಮಳೆ ಕೊರತೆಯಿಂದ ಬಿತ್ತನೆ ಕಾರ್ಯಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಶ್ರೀ ಚೌಡೇಶ್ವರಿ ಭಜನಾ ಮಂಡಳಿ ನೇತೃತ್ವದಲ್ಲಿ ಕಪ್ಪೆಗಳಿಗೆ ಸಂಪ್ರದಾಯಬದ್ಧವಾಗಿ ಮದುವೆ ನೆರವೇರಿಸಿ, ಮೆರವಣಿಗೆ ನಡೆಸಲಾಯಿತು. ಬಳಿಕ ಮನೆ ಮನೆಗಳಿಗೆ ತೆರಳಿ ಕಪ್ಪೆಗಳಿಗೆ ನೀರಿನ ಅಭಿಷೇಕ ಮಾಡುವ ಮೂಲಕ ಮಳೆಯಾಗಲೆಂದು ಪ್ರಾರ್ಥಿಸಿದರು.
ಬಡಾವಣೆಯ ಐದು ದೇವಸ್ಥಾನಗಳಲ್ಲಿ ಜಲಾಭಿಷೇಕ ನಡೆಸಿದ ಭಕ್ತರು, ಮನೆಗಳ ಮಾಳಿಗೆಯಲ್ಲಿರುವ ಡೋಣಿಗಳಿಂದ ನೂರು ಹಾಕಿ ಕಪ್ಪೆಗಳಿಗೆ ನೀರು ಸುರಿದು ಪೂಜೆ ಸಲ್ಲಿಸಿದರು.
ಮಳೆ ಕೈಕೊಟ್ಟ ಸಂದರ್ಭಗಳಲ್ಲಿ ಕಪ್ಪೆಗಳಿಗೆ ಮದುವೆ ಮಾಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಆಚರಣೆಯ ನಂತರ ಅನೇಕ ಬಾರಿ ಉತ್ತಮ ಮಳೆಯಾಗಿರುವ ಉದಾಹರಣೆಗಳಿವೆ ಎಂದು ಸ್ಥಳೀಯರು ತಿಳಿಸಿದರು.
ಬೆಳಗ್ಗೆಯಿಂದ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಬಡಾವಣೆಯ ನಿವಾಸಿಗಳು, ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಯಾಪಿಶೆಟ್ಟಿ ಚಿನ್ನಯ್ಯ, ಬಂಗಿ ನರಸರೆಡ್ಡಿ, ವಿಜಯ, ನರಸಪ್ಪ ,ತಿಮ್ಮಾರೆಡ್ಡಿ, ತಿಮ್ಮಣ್ಣ, ವಿಕ್ಕಿ ಸಿರಿ, ನರಸಪ್ಪಸೇರಿದಂತೆ ಅನೇಕರು ಭಾಗವಹಿಸಿದ್ದರು.






