Raichur | 11.94 ಲಕ್ಷ ರೂ. ಮೌಲ್ಯದ ಗಾಂಜಾ ಗಿಡಗಳು ಜಪ್ತಿ : ಆರೋಪಿ ಬಂಧನ

ರಾಯಚೂರು: ದೇವದುರ್ಗ ತಾಲೂಕಿನ ದೇವರಗುಡ್ಡ ಸೀಮಾಂತರದಲ್ಲಿ ಪೊಲೀಸರು ದಾಳಿ ನಡೆಸಿ, ಅಕ್ರಮವಾಗಿ ಬೆಳೆದಿದ್ದ 11,94,500 ರೂ. ಮೌಲ್ಯದ 23 ಕೆ.ಜಿ. 890 ಗ್ರಾಂ ಹಸಿ ಗಾಂಜಾವನ್ನು ಜಪ್ತಿ ಮಾಡಿಕೊಂಡು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ದೇವದುರ್ಗ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಪುಂಡಲೀಕ ಎಂ. ಪಟಾತರ, ಎಎಸ್ಐ ಸೈಯದ್ ಚಾಂದ ಪಾಶ ಹಾಗೂ ಹೆಡ್ ಕಾನ್ಸ್ಟೆಬಲ್ ನರಸಪ್ಪ ಅವರನ್ನೊಳಗೊಂಡ ಪೊಲೀಸ್ ತಂಡವು ಬುಧವಾರ, ಅಕ್ಟೋಬರ್ 28ರಂದು ಖಚಿತ ಮಾಹಿತಿ ಮೇರೆಗೆ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೇವರಗುಡ್ಡ ಸೀಮಾಂತರದಲ್ಲಿ ದಾಳಿ ನಡೆಸಿತು. ಈ ವೇಳೆ ಒಟ್ಟು 51 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು, ಮದರಕಲ್ ಗ್ರಾಮದ ಸಾಬಣ್ಣನನ್ನು (45) ಬಂಧಿಸಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣಾಂಗ್ಶುಗಿರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಹರೀಶ್ ಹಾಗೂ ಲಿಂಗಸುಗೂರು ಡಿವೈಎಸ್ಪಿ ಸುಲೇಮಾನ್ ತಹಶೀಲ್ದಾರ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




