Raichur | ಗಾಂಜಾ ಮಾರಾಟ ಪ್ರಕರಣ: ಮೂವರು ಆರೋಪಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ

ರಾಯಚೂರು : ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ರಾಯಚೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಲಾ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮನ್ನಲಾಪೂರ–ರಾಯಚೂರು ರಸ್ತೆಯ ಮನ್ನಲಾಪೂರ ರೈಲ್ವೆ ಗೇಟ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಉಮೇಶ ಸೇರಿದಂತೆ ಮೂವರು ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿಗಳಿಂದ 1.08 ಕೆ.ಜಿ. ಒಣ ಗಾಂಜಾ, 514 ಗ್ರಾಂ ಹಸಿ ಗಾಂಜಾ, ಮೂರು ಮೊಬೈಲ್ಗಳು ಹಾಗೂ 300 ರೂ. ನಗದನ್ನು ವಶಪಡಿಸಿಕೊಂಡಿದ್ದರು.
ಈ ಸಂಬಂಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 2024ರಲ್ಲಿ ಗುನ್ನೆ ಸಂಖ್ಯೆ 76/2024ರ ಅಡಿಯಲ್ಲಿ ಎನ್ಡಿಪಿಎಸ್ ಕಾಯ್ದೆಯ ಕಲಂ 20(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಅಂದಿನ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಉಪನಿರೀಕ್ಷಕ, ಪ್ರಸ್ತುತ ಯರಗೇರಾ ಪೊಲೀಸ್ ಠಾಣೆಯ ಉಪನಿರೀಕ್ಷಕರಾಗಿರುವ ಪ್ರಕಾಶ ರೆಡ್ಡಿ ಡಂಬಲ್ ಅವರು ತನಿಖೆ ಪೂರ್ಣಗೊಳಿಸಿ, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಮೂವರು ಆರೋಪಿಗಳಿಗೆ ಎನ್ಡಿಪಿಎಸ್ ಕಾಯ್ದೆ-1985ರ ಕಲಂ 20(ಬಿ)(ii)(ಬಿ) ಅಡಿಯಲ್ಲಿ ತಲಾ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಫಿರ್ಯಾದಿದಾರರಾದ ರವಿರಾಜ್ (ಸಿಎಚ್ಸಿ-320) ಹಾಗೂ ದಾಳಿಯಲ್ಲಿ ಭಾಗವಹಿಸಿದ್ದ ಜಿ. ಶ್ರೀನಿವಾಸ (ಎಎಸ್ಐ) ಅವರು ಸಾಕ್ಷ್ಯ ನುಡಿದಿದ್ದರು. ಸುಗಯ್ಯ (ಸಿಪಿಸಿ-157), ಮಲ್ಲಿಕಾರ್ಜುನ (ಸಿಪಿಸಿ-360) ಮತ್ತು ಮುಸ್ತಫಾ (ಸಿಪಿಸಿ-632) ಅವರು ನ್ಯಾಯಾಲಯಕ್ಕೆ ಸಾಕ್ಷಿಗಳನ್ನು ಹಾಜರುಪಡಿಸುವ ಕಾರ್ಯ ನಿರ್ವಹಿಸಿದ್ದರು.
ರಾಯಚೂರು ಗ್ರಾಮೀಣ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ನಿಂಗಪ್ಪ ಎನ್.ಆರ್. ಅವರು ಪ್ರಕರಣದ ವಿಚಾರಣೆಯ ಮೇಲ್ವಿಚಾರಣೆ ವಹಿಸಿದ್ದರು. ಸರ್ಕಾರದ ಪರವಾಗಿ ಪ್ರಧಾನ ಸಾರ್ವಜನಿಕ ಅಭಿಯೋಜಕ ಕೆ. ಗೋಪಾಲರಾವ್ ವಾದ ಮಂಡಿಸಿದ್ದರು.






