Raichur | ಗಾಂಜಾ ಮಾರಾಟ : ಇಬ್ಬರ ಬಂಧನ

ರಾಯಚೂರು, ಸೆ.18: ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್‌ಬಿಎಸ್ ನಗರದ ಅಲ್ಲಮಪ್ರಭು ಕಾಲೋನಿ ಹೊರವಲಯದಲ್ಲಿ ಅಕ್ರಮವಾಗಿ ಒಣ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, 1,810 ಗ್ರಾಂ ಒಣ ಗಾಂಜಾ ಜಪ್ತಿ ಮಾಡಿದ್ದಾರೆ.
ಜಪ್ತಿಯಾದ ಗಾಂಜಾದ ಅಂದಾಜು ಮೌಲ್ಯ 36,000 ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶುಗಿರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಹರೀಶ, ಪೊಲೀಸ್ ಉಪಾಧೀಕ್ಷಕ ಶಾಂತವೀರ ಹಾಗೂ ಪಶ್ಚಿಮ ವೃತ್ತದ ಸಿಪಿಐ ಉಮೇಶ್ ಕಾಂಬ್ಳೆ ಅವರ ಮಾರ್ಗದರ್ಶನದಲ್ಲಿ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಪಿಎಸ್‌ಐ ಮಹ್ಮದ್ ಇಸಾಕ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ವಿಶೇಷ ತಂಡ ಸೆಪ್ಟೆಂಬರ್ 17ರಂದು ಮಧ್ಯಾಹ್ನ ಅಲ್ಲಮಪ್ರಭು ಕಾಲೋನಿ ಹೊರವಲಯದಲ್ಲಿ ಕಾರ್ಯಾಚರಣೆ ನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದಿದೆ.
ಬಂಧಿತರನ್ನು ಮೊಹ್ಮದ್ ಕೈಫ್ (20), ಎಲ್‌ಬಿಎಸ್ ನಗರದಲ್ಲಿರುವ ಕ್ರೌನ್ ಬೇಕರಿ ಸಮೀಪ ನಿವಾಸಿ ಹಾಗೂ ಹುಸೇನ್ ಬಾಷಾ (23), ಎಲ್‌ಬಿಎಸ್ ನಗರ ನಿವಾಸಿ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 1,810 ಗ್ರಾಂ ಒಣ ಗಾಂಜಾವನ್ನು ಜಪ್ತಿ ಮಾಡಲಾಗಿದ್ದು, ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್‌ಐ ಮುಹಮ್ಮದ್ ಇಸಾಕ್, ಹೆಡ್ ಕಾನ್ಸ್‌ಟೇಬಲ್ ಮಹ್ಮದ್ ರಫೀ, ಶರಣಬಸವ, ಶಿವಮೂರ್ತೆಪ್ಪ, ಪೊಲೀಸ್ ಕಾನ್ಸ್‌ಟೇಬಲ್ ಗುರುಸ್ವಾಮಿ ಹಾಗೂ ಜೀಪ್ ಚಾಲಕ ವೆಂಕಟೇಶ್ ಭಾಗವಹಿಸಿದ್ದರು.
ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶುಗಿರಿ ಶ್ಲಾಘಿಸಿದ್ದಾರೆ.






