Raichur| ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಗೆ ಅದ್ದೂರಿ ಸ್ವಾಗತ

ರಾಯಚೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮರಣಾರ್ಥ ಹಾಗೂ ದೇಶದ ಏಕತೆ, ಸಹೋದರತ್ವ ಮತ್ತು ಸದ್ಭಾವನೆಯ ಸಂದೇಶ ಸಾರುವ 35ನೇ ವರ್ಷದ ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆ ಆ.9ರಂದು ತಮಿಳುನಾಡಿನ ಶ್ರೀಪೆರಂಬದೂರಿನಿಂದ ಆರಂಭವಾಗಲಿದೆ.
ಆ.9ರಂದು ಬೆಳಿಗ್ಗೆ 9 ಗಂಟೆಗೆ ಶ್ರೀಪೆರಂಬದೂರಿನಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ವಿವಿಧ ರಾಜ್ಯಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಯಾತ್ರೆಗೆ ಚಾಲನೆ ನೀಡಲಾಗುವುದು. ಕರ್ನಾಟಕ ಸೇರಿದಂತೆ ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಹರಿಯಾಣ ರಾಜ್ಯಗಳ ವಿವಿಧ ನಗರಗಳ ಮೂಲಕ ಯಾತ್ರೆ ಸಾಗಲಿದೆ.
ಕರ್ನಾಟಕದಿಂದ ಸುಮಾರು 150 ಕಾಂಗ್ರೆಸ್ ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಆ.20ರಂದು ನವದೆಹಲಿಯ ವೀರಭೂಮಿಗೆ ತಲುಪಲಿದ್ದಾರೆ. ಆ.19ರಂದು ನವದೆಹಲಿಯ 24 ಅಕ್ಬರ್ ರಸ್ತೆಯಲ್ಲಿ ಜ್ಯೋತಿಯನ್ನು ಸ್ವೀಕರಿಸುವ ಕಾರ್ಯಕ್ರಮ ನಡೆಯಲಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ.
ದೇಶದ ಏಕತೆ, ಶಾಂತಿ, ಸಹೋದರತ್ವ ಹಾಗೂ ಭಯೋತ್ಪಾದನೆ ವಿರುದ್ಧ ಜಾಗೃತಿ ಮೂಡಿಸುವುದು ಯಾತ್ರೆಯ ಪ್ರಮುಖ ಉದ್ದೇಶವಾಗಿದೆ. ರಾಷ್ಟ್ರ ನಿರ್ಮಾಣ ಹಾಗೂ ದೇಶದ ಏಕತೆ ಬಲಪಡಿಸಲು ರಾಜೀವ್ ಗಾಂಧಿ ನೀಡಿದ ಕೊಡುಗೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಯಾತ್ರೆ ಹಮ್ಮಿಕೊಳ್ಳಲಾಗಿದೆ.
‘ನಮಗೆ ಶಾಂತಿ ಬೇಕು. ವಿಶ್ವಶಾಂತಿಗಾಗಿ ಪ್ರಾರ್ಥಿಸೋಣ’ ಎಂಬ ಸಂದೇಶದೊಂದಿಗೆ ಯಾತ್ರೆ ಸಾಗಲಿದೆ.
ರಾಯಚೂರಿನಲ್ಲಿ ಯಾತ್ರೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಇಟಗಿ, ರಾಜೀವ್ ಗಾಂಧಿ ಸದ್ಭಾವನಾ ಯಾತ್ರಾ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ಸೈಯದ್ ಮೋಸಿನ್, ಕರ್ನಾಟಕ ರಾಜ್ಯ ಉಪಾಧ್ಯಕ್ಷ ಸೈಯದ್ ಉಮರ್ ಫಾರೂಕ್, ಸಮಿತಿ ಮುಖಂಡ ಆರ್. ದೊರೈವೆಲು, ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ ಗೌಡ ಹಾಗೂ ಐಎನ್‌ಟಿಯುಸಿ ಅಧ್ಯಕ್ಷೆ ಲಕ್ಷ್ಮಿವೆಂಕಟೇಶ್ ಸೇರಿದಂತೆ ಹಲವರು ಸ್ವಾಗತ ಕೋರಿದರು.
ಸೈಯದ್ ಮೋಸಿನ್ ಅವರ ನೇತೃತ್ವದಲ್ಲಿ ರಾಯಚೂರಿನಲ್ಲಿ ಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದ ಬಳಿಕ ಯಾತ್ರೆಯನ್ನು ಮುಂದಿನ ನಗರಕ್ಕೆ ಬೀಳ್ಕೊಡಲಾಯಿತು.






