ರಾಯಚೂರು | ಹಟ್ಟಿ ಚಿನ್ನದ ಗಣಿಯ ಪದವಿಪೂರ್ವ ಕಾಲೇಜು ಶಿಥಿಲಾವಸ್ಥೆಯಲ್ಲಿ : ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ರಾಯಚೂರು:ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿಗಳು ಶಿಥಿಲಾವಸ್ಥೆಗೊಂಡಿದ್ದು, ದುರಸ್ತಿಗೊಳಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ನೇತೃತ್ವದಲ್ಲಿ ಇಂದು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಕಾಲೇಜು ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದರು.
ಹಟ್ಟಿ ಕ್ಯಾಂಪ್ ನಲ್ಲಿರುವ ಪದವಿ ಪೂರ್ವ ಕಾಲೇಜು ಕಟ್ಟಡ ಸಂಪೂರ್ಣವಾಗಿ ಶಿಥಿಲವಾಸ್ಥೆ ತಲುಪಿದೆ. ಯಾವಾಗ ಬೇಕಾದರೂ ಕಟ್ಟಡ ವಿದ್ಯಾರ್ಥಿಗಳ ಮೇಲೆ ಬಿದ್ದು, ವಿದ್ಯಾರ್ಥಿಗಳ ಜೀವ ತೆಗೆದುಕೊಳ್ಳುವ ಸಂಭವವಿದೆ. ಶೌಚಾಲಯಗಳು ಇಲ್ಲದೇ ವಿದ್ಯಾರ್ಥಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಉತ್ತಮವಾಗಿ ಬೋಧನೆ ಮಾಡುತ್ತಿದ್ದ ಶಿಕ್ಷಕರನ್ನು ಎರವಲು ಸೇವೆಗೆ ಕಳುಹಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಶಾಸಕ ಮಾನಪ್ಪ ವಜ್ಜಲ್ ಕೂಡಲೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಒತ್ತಾಯಿಸಿದರು.
ಕಾಲೇಜಿಗೆ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಬೇಕು ಎಂದರೆ ಸರಿಯಾದ ಸಮಯಕ್ಕೆ ಬಸ್‌ಗಳು ಇಲ್ಲ. ಊಟಿ, ಗಾಣದಾಳ, ರೋಡಲಬಂಡಾ, ವಂದಿಲಿ, ಹೊಸೂರು, ಮೇದಿನಾಪೂರು, ಆನ್ವರಿ, ಪಾಮನಕಲ್ಲೂರು, ತವಗ, ಕಡೋಣ ಸೇರಿದಂತೆ ಹಲವು ಊರುಗಳಿಗೆ ಬಸ್‌ಗಳು ಬರದೇ ಕಾಲೇಜಿಗೆ ತಲುಪಲು ಆಗುತ್ತಿಲ್ಲ ಎಂದು ದೂರಿದರು.
ಡಿವೈಎಫ್ಐ ಮುಖಂಡ ಕಾಶಿಪತಿ ಮಾತನಾಡಿ, ಕಾಲೇಜಿನಲ್ಲಿ ಇಂತಹ ಹತ್ತು ಹಲವು ಸಮಸ್ಯೆಗಳು ಕಾಡುತ್ತಿವೆ. ಕನಿಷ್ಟ ಪಕ್ಷ ಇಂತಹ ಕಷ್ಟಗಳನ್ನು ತೋಡಿಕೊಳ್ಳಲು ಕಾಲೇಜು ಅಭಿವೃದ್ಧಿ ಸಮಿತಿ(CDC)ಯೂ ಇಲ್ಲ. ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಾಸಕರು ಮಾತ್ರ ಇಲ್ಲಿಯವರೆಗೂ ಕಾಲೇಜಿಗೆ ಭೇಟಿ ನೀಡಿಲ್ಲ. ಇದರಿಂದ ವಿದ್ಯಾರ್ಥಿಗಳ ಗೋಳು ಕೇಳೋರು ಯಾರು ಎಂಬಂತಾಗಿದೆ. ಪಿಯುಸಿ ವಿಜ್ಞಾನ ವಿಭಾಗದ ಪ್ರಯೋಗಾಲಯದ ಸಾಮಾಗ್ರಿಗಳನ್ನು ನಿರ್ವಹಣೆಗಾಗಿ ಹುದ್ದೆ ಖಾಲಿ ಇದ್ದು, ಕೂಡಲೇ ಸಿಬ್ಬಂದಿ ನೇಮಕಾತಿ ಮಾಡಬೇಕು ಎಂದರು.
ಪ್ರತಿಭಟನಾ ಸ್ಥಳಕ್ಕೆ ಡಿಡಿಪಿಯು ಬಸಪ್ಪ ಕೊಟ್ಟೂರು ಆಗಮಿಸಿ ಮನವಿ ಸ್ವೀಕರಿಸಿ ಒಂದು ವಾರದೊಳಗೆ ಪರಿಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ತಾಲೂಕು ಅಧ್ಯಕ್ಷ ಗೊವೀಂದ, ತಾಲೂಕು ಕಾರ್ಯದರ್ಶಿ ಚೆನ್ನಬಸವ ನಿಲೋಗಲ್, ಡಿವೈಎಫ್ಐ ಮುಖಂಡರಾದ ಶಂಶುದ್ದೀನ್ ಔಟಿ, ರಿಯಾಜ್, ಸಿಐಟಿಯುನ ನಿಂಗಪ್ಪ ಎಂ, ಹಾಜಿಬಾಬಾ ಕಟ್ಟಿಮನಿ, ಖಾಜಾ ಮೈನುದ್ದೀನ್, ಕೆಪಿಆರ್ ಎಸ್ ನ ಮಹಾಂತೇಶ, ವಿದ್ಯಾರ್ಥಿಗಳಾದ ನರಸಮ್ಮ, ರೂಪಾ, ತನುಶ್ರೀ, ತಬುಸುಮ್, ರೇಣುಕಾ, ಸಲ್ಲಾವುದ್ದೀನ್, ಜೈನೇಶ ಸೇರಿಂದತೆ ನೂರಾರು ವಿದ್ಯಾರ್ಥಿಗಳು ಇದ್ದರು.







