ರಾಯಚೂರು | ಡೆಂಗ್ಯೂ ತಡೆಗೆ ಆರೋಗ್ಯ ಶಿಕ್ಷಣ ಜಾಗೃತಿ ಕಾರ್ಯಕ್ರಮ

ರಾಯಚೂರು, ಆ.29 : ಮಡ್ಡಿಪೇಟೆ ಏರಿಯಾದಲ್ಲಿ ಡೆಂಗ್ಯೂ ಪ್ರಕರಣವೊಂದು ಕಂಡು ಬಂದ ಪ್ರಯುಕ್ತ ಜನರಲ್ಲಿ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸೂಚನೆಯಂತೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ಎಚ್.ದಾಸಪ್ಪನವರ ಹಾಗೂ ಕ್ಷೇತ್ರ ಸಿಬ್ಬಂದಿ ತಂಡವು ಆ.29ರಂದು ಮನೆ ಭೇಟಿ ಕಾರ್ಯಕ್ರಮ ನಡೆಸಿ ಡೆಂಗ್ಯೂ ಜ್ವರ ತಡೆ ಕುರಿತು ಆರೋಗ್ಯ ಶಿಕ್ಷಣ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಿಂದ ಕಾರ್ಯಕ್ರಮ ಕೈಗೊಂಡು ಹತ್ತಿರದ ನೊರೆ ದರ್ಗಾದಲ್ಲಿ ಧ್ವನಿವರ್ಧಕ ಮೂಲಕ ಪ್ರಚಾರ ನಡೆಸಿ ಡೆಂಗ್ಯೂ ಜ್ವರ ಕುರಿತು ಜಾಗೃತಿ ಮೂಡಿಸಿದರು.
ಮಡ್ಡಿಪೇಟೆ ಸಾರ್ವಜನಿಕರು ಡೆಂಗ್ಯೂ ಜ್ವರದ ಕುರಿತು ಭಯಪಡಬಾರದು, ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ತಿಳಿಸಿದರು. ಸ್ಥಳೀಯ ಇಖ್ರಾ ಶಾಲೆಯಲ್ಲಿ ಎಮ್.ಟಿ.ಎಸ್. ಸಂಧ್ಯಾ ಮಾತನಾಡಿದರು.
ಈ ಸಂದರ್ಭದಲ್ಲಿ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಮುಖ್ಯ ಗುರುಗಳಾದ ಖಮ್ರುನ್ನಿಸಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ ಕೆ., ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಂಜುಳಾ, ಆಶಾ ಕಾರ್ಯಕರ್ತೆಯರಾದ ಲಕ್ಮಿ, ಸುನೀತ ಇದ್ದರು.







