ರಾಯಚೂರು | ತೋಟಗಾರಿಕೆ ಉಪನಿರ್ದೇಶಕ ಕಚೇರಿ ಈಗ ಜಂಟಿ ನಿರ್ದೇಶಕ ಕಚೇರಿಯಾಗಿ ಮೇಲ್ದರ್ಜೆಗೆ

ಮಹಮ್ಮದ್ ಅಲಿ
ರಾಯಚೂರು ಜಿಲ್ಲೆಯ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕಚೇರಿಯನ್ನು ಜಂಟಿ ನಿರ್ದೇಶಕರ ಕಚೇರಿಯಾಗಿ ಮೇಲ್ದರ್ಜೆಗೇರಿಸಿದೆ.
ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಯಲ್ಲಿರುವ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ತೋಟಗಾರಿಕೆ ಉಪನಿರ್ದೇಶಕ ಸೇರಿದಂತೆ ಇತರ ಹುದ್ದೆಗಳ ನಡುವೆ ಈಗ ಜಂಟಿ ನಿರ್ದೇಶಕ ಹುದ್ದೆಯೂ ಸೇರ್ಪಡೆಯಾಗಿದೆ. ಬಹುಕಾಲದಿಂದ ಜಿಲ್ಲೆಯಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಮುಹಮ್ಮದ್ ಅಲಿ ಅವರಿಗೆ ಜಂಟಿ ನಿರ್ದೇಶಕ ಹುದ್ದೆಗೆ ಬಡ್ತಿ ದೊರೆತಿದ್ದು, ರಾಯಚೂರಿನ ಮೊದಲ ತೋಟಗಾರಿಕೆ ಜಂಟಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ನಗರದ ಸ್ಟೇಷನ್ ರಸ್ತೆಯ ಸಾರ್ವಜನಿಕ ಉದ್ಯಾನವನದಲ್ಲಿರುವ ಹಳೆಯ ಕಚೇರಿಯನ್ನೇ ನಾಮಫಲಕ ಬದಲಾವಣೆ ಮತ್ತು ಸುಣ್ಣ ಬಣ್ಣ ಬಳಿದು ಹೊಸ ಜಂಟಿ ನಿರ್ದೇಶಕ ಕಚೇರಿಯಾಗಿ ಬಳಸಲಾಗುತ್ತಿದೆ.
ಈ ಕುರಿತು ಜಂಟಿ ನಿರ್ದೇಶಕ ಮಹಮ್ಮದ್ ಅಲಿ ಅವರು ಪ್ರತಿಕ್ರಿಯಿಸಿ, “ಉಪನಿರ್ದೇಶಕ ಹುದ್ದೆಯಿಂದ ಜಂಟಿ ನಿರ್ದೇಶಕನಾಗಿ ಬಡ್ತಿ ಪಡೆದಿದ್ದೇನೆ. ಈ ಹುದ್ದೆ ಹೊಸದಾಗಿ ಸೃಷ್ಟಿಸಿದಲ್ಲ, ಹಳೆಯ ಹುದ್ದೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಕಾರ್ಯವ್ಯಾಪ್ತಿ ಈಗ ಮತ್ತಷ್ಟು ವಿಸ್ತರಿಸಲ್ಪಟ್ಟಿದ್ದು, ಜಿಲ್ಲೆಯಲ್ಲಿ ತೋಟಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ವೇಗ ನೀಡಲು ಇದು ಸಹಕಾರಿ” ಎಂದು ತಿಳಿಸಿದ್ದಾರೆ.







