ರಾಯಚೂರು | ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಪತಿ ಆತ್ಮಹತ್ಯೆ ; ಸಚಿವರಿಗೆ ಮಂಗಳ ಸೂತ್ರ ಕಳುಹಿಸಿದ ಪತ್ನಿ

ರಾಯಚೂರು : ಆತ್ಮಹತ್ಯೆಗೆ ಶರಣಾದ ವ್ಯಕ್ತಿಯೊಬ್ಬನ ಪತ್ನಿ ಗುರುವಾರ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಮಂಗಳಸೂತ್ರ ಕಳುಹಿಸಿ ಪತಿಯ ಸಾವಿಗೆ ಕಾರಣವಾದ ಕಂಪನಿಯ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಜ.17 ರಂದು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಶರಣಬಸವ ಎನ್ನುವ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಶರಣಬಸವ ಅವರಿಗೆ ಸಾಲ ಕೊಟ್ಟಿರುವ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನಿತ್ಯ ಕಿರುಕುಳ ನೀಡಿದ್ದಾರೆ ಎಂದು ಮೃತಳ ಪತ್ನಿ ಗೃಹ ಸಚಿವರಿಗೆ ಮಂಗಳ ಸೂತ್ರ ಕಳುಹಿಸಿ ತಿಳಿಸಿದ್ದಾರೆ.
ಶರಣಬಸವ ಅವರು ಡ್ರೈವಿಂಗ್ ಜೊತೆ ಕೂಲಿ ಕೆಲಸವನ್ನೂ ಮಾಡುತ್ತಿದ್ದರು. ಆದರೆ ಕೆಲ ಖಾಸಗಿ ಕಂಪನಿಗಳಿಂದ ಸುಮಾರು 6-8 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಇತ್ತೀಚೆಗೆ ಕೆಲ ಕಂತುಗಳು ಬಾಕಿ ಇದ್ದ ಹಿನ್ನೆಲೆ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗುತ್ತಿದ್ದಂತೆ ಶರಣಬಸವ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದಾದ ಬಳಿಕ ಈಗ ಮೃತನ ಕುಟುಂಬ ಜಮಸೇವಾ ಫೌಂಡೇಶನ್ ಸಂಘಟನೆ ಜಾವೀದ್ ಖಾನ್ ಜೊತೆಗೆ ಒಗ್ಗೂಡಿ ಹೋರಾಟಕ್ಕಿಳಿದಿದ್ದಾರೆ. ಪತಿ ಶರಣಬಸವ ಸಾವಿನ ಬಳಿಕ ಪತ್ನಿ ಪಾರ್ವತಿ ಎಲ್ಲಾ ಕಾರ್ಯಗಳನ್ನ ಮುಗಿಸಿ, ಆಕೆಯ ಮಾಂಗಲ್ಯ ಸರವನ್ನು ಗೃಹ ಸಚಿವರಿಗೆ ರವಾನಿಸಿದ್ದಾರೆ. ನನ್ನ ಪತಿ ಸಾಲ ಮಾಡಿದ್ದಕ್ಕೆ ಸಿಬ್ಬಂದಿ ಕಿರುಕುಳ ನೀಡಿದ್ದಾರೆ. ಅದರ ವಿರುದ್ಧ ಕ್ರಮವಾಗಬೇಕು ಎಂದು ಅಂಚೆ ಪೋಸ್ಟ್ ಮೂಲಕ ಸಚಿವರಿಗೆ ಮಾಂಗಲ್ಯ ಸರವನ್ನು ಕಳುಹಿಸಿದ್ದಾರೆ.







