ರಾಯಚೂರು | ನನಗೆ ಜೀವ ಬೆದರಿಕೆ ಇದೆ : ರಾಜ್ಯ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ

ರಾಯಚೂರು: ರಾಜ್ಯದ ಯಾವುದೇ ಭಾಗದಲ್ಲಿ ಅನ್ಯಾಯವಾದರೂ ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇನೆ. ನನಗೆ ಜೀವ ಬೆದರಿಕೆ ಇದೆ. ಆದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ರಾಜ್ಯ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಹೇಳಿದರು.
ತಾಲೂಕಿನ ಮಿಟ್ಟಿಮಲ್ಕಾಪುರ ಗ್ರಾಮದ ವೆಂಕಟೇಶ್ವರ ಮಿನರಲ್ ಸ್ಟೋನ್ ಕ್ರಷರ್ ಮತ್ತು ಓಂ ಶಕ್ತಿ ಕಂಪನಿಯ ಕಲ್ಲು ಗಣಿಗಾರಿಕೆಯಲ್ಲಿ ನಿಯಮ ಉಲ್ಲಂಘನೆ ನಡೆದಿದೆ ಎಂಬ ಹಿನ್ನೆಲೆಯಲ್ಲಿ ಸುವೋಮೋಟೊ ಕೇಸ್ ದಾಖಲಿಸಿರುವ ಅವರು, ನನಗೆ ಭಗವಂತ ಒಂದು ಅವಕಾಶ ಕೊಟ್ಟಿದ್ದಾನೆ. ರಾಜ್ಯದ ಎಲ್ಲ ಜಿಲ್ಲೆಗಳ ಸಂಚಾರ ಮಾಡುತ್ತಿದ್ದೇನೆ. ನನಗೆ 65 ವರ್ಷವಾಗಿದೆ. ಜೀವ ಬೆದರಿಕೆ ಸಾಕಷ್ಟಿದೆ. ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಜೀವ ಬೆದರಿಕೆ ಇರುವುದರಿಂದ ಪಿಸ್ತೂಲ್ ತೆಗೆದುಕೊಂಡಿದ್ದೇನೆ, ಪರವಾನಗಿಗೆ ಅರ್ಜಿ ಹಾಕಿದ್ದೇನೆ. ದೇಶದ ಗಡಿಯಲ್ಲಿ ಪ್ರತಿ ಸೆಕೆಂಡಿಗೂ ನಮ್ಮ ಸೈನಿಕರು ಸಾಯುತ್ತಿದ್ದಾರೆ. ನಾವು ಸತ್ತರೆ ಏನಾಗುತ್ತದೆ? ನನಗೆ ಮಾತ್ರವಲ್ಲ, ಮಾಧ್ಯಮದವರೂ ಪ್ರಾಮಾಣಿಕವಾಗಿ ಬರೆದರೆ ಅವರಿಗೂ ಬೆದರಿಕೆ ಬರುತ್ತದೆ. ಆದರೆ ನೀವು ನನ್ನ ಜತೆ ಇದ್ದರೆ ಯಾರೂ ಏನೂ ಮಾಡಲಾರರು ಎಂದರು.





