ರಾಯಚೂರು | ಆರ್‌ಟಿಪಿಎಸ್‌ನಲ್ಲಿ ಅಣುಸ್ಥಾವರ ಸ್ಥಾಪಿಸುವ ಪ್ರಕ್ರಿಯೆ ಕೈ ಬಿಡದಿದ್ದರೆ ತೀವ್ರ ಹೋರಾಟ : ಬಸವರಾಜ ಕಳಸ

ರಾಯಚೂರು: ಜಿಲ್ಲೆಯ ಶಾಖೋತ್ಪನ್ನ ಕೇಂದ್ರ ಪ್ರದೇಶದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಜನರ ಆರೋಗ್ಯ ಕಾಪಾಡುವ ಬದಲು “ಆರೋಗ್ಯ ಕೇಳಿದವರಿಗೆ ವಿಷ ಕೊಡಲು ಹೊರಟಿದೆ” ಎಂದು ನಾಗರೀಕ ವೇದಿಕೆಯ ಮುಖಂಡ ಬಸವರಾಜ ಕಳಸ ಆರೋಪಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್‌ಟಿಪಿಎಸ್ ಪ್ರದೇಶಕ್ಕೆ ಕೇಂದ್ರ ಅಣು ವಿದ್ಯುತ್ ನಿಗಮದ ಮೂವರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ಆತಂಕಕಾರಿ ಬೆಳವಣಿಗೆ ಎಂದರು. ಅಣು ವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ಭವಿಷ್ಯದ ಪೀಳಿಗೆಗೆ ಭವಿಷ್ಯವೇ ಇಲ್ಲದಂತಾಗುತ್ತದೆ. ವಿಕಿರಣದ ಪರಿಣಾಮದಿಂದ ಕ್ಯಾನ್ಸರ್ ಸೇರಿದಂತೆ ಶ್ವಾಸಕೋಶ ರೋಗಗಳು, ಇತರೆ ಗಂಭೀರ ಅನಾರೋಗ್ಯಗಳು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ ಕೃಷಿ ವಲಯದ ಮೇಲೂ ದುಷ್ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆ ಕುಸಿತಗೊಂಡಿದ್ದು, ಏಮ್ಸ್ ಆಸ್ಪತ್ರೆ ಸ್ಥಾಪನೆಗಾಗಿ ವರ್ಷಗಳಿಂದ ಹೋರಾಟ ನಡೆದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಇಂತಹ ಸಂದರ್ಭದಲ್ಲಿ ಜನರ ಜೀವ ರಕ್ಷಿಸುವ ಬದಲು ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗಿರುವುದು ಖಂಡನೀಯ. ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಹೋರಾಟಗಾರ ಎಸ್. ಮಾರೆಪ್ಪ ಮಾತನಾಡಿ, ಅಣು ವಿದ್ಯುತ್ ಸ್ಥಾವರಗಳ ಅಪಾಯಗಳು ದೇಶದ ಜನರ ಮುಂದೆ ಸ್ಪಷ್ಟವಾಗಿವೆ. ಹೀರೋಷಿಮಾ–ನಾಗಾಸಾಕಿ ಘಟನೆಗಳೇ ವಿಕಿರಣದಿಂದ ಮಾನವ ಜೀವಕ್ಕೆ ಆಗುವ ಭೀಕರ ಪರಿಣಾಮಗಳ ಉದಾಹರಣೆಗಳಾಗಿವೆ. ಇಂತಹ ಅಪಾಯಗಳಿದ್ದರೂ ಸರ್ಕಾರ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಮುಂದಾಗಿರುವುದು ಗಂಭೀರ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಯಾದಗಿರಿ ಜಿಲ್ಲೆಯ ಗೋಗಿ, ದರ್ಶನಾಪುರ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಯುರೇನಿಯಂ ಲಭ್ಯವಾಗಿರುವ ಹಿನ್ನೆಲೆ, ಅಪಾಯಕಾರಿ ಅಣು ಸ್ಥಾವರ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಜೀವಕ್ಕೆ ಅಪಾಯಕಾರಿಯಾದ ಕೈಗಾರಿಕೆಗಳು ರಾಯಚೂರು ಜಿಲ್ಲೆಗೆ ಮಾತ್ರ ಸೀಮಿತವಾಗುತ್ತಿವೆ ಎಂದು ಅವರು ಆರೋಪಿಸಿದರು.
ಅಣು ವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ಭವಿಷ್ಯದ ಪೀಳಿಗೆಯೇ ಅಪಾಯಕ್ಕೆ ಸಿಲುಕಲಿದೆ. ಹೀಗಾಗಿ ನಾಗರೀಕ ವೇದಿಕೆಯ ನೇತೃತ್ವದಲ್ಲಿ ಅಣು ಸ್ಥಾವರ ವಿರೋಧಿಸಿ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಮಾರೆಪ್ಪ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಶೋಕಕುಮಾರ ಜೈನ್, ಜೈ ಭೀಮ, ಮಲ್ಲಪ್ಪ ದಿನ್ನಿ, ನರಸಿಂಹಲು, ವಿನಯಕುಮಾರ ಚಿತ್ರಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.







