ರಾಯಚೂರು | ಇಫ್ತಾರ್ ಕೂಟ, ಯುವಜನ ಆಯೋಗದ ಕುರಿತು ಸಂವಾದ ಕಾರ್ಯಕ್ರಮ

ರಾಯಚೂರು: ಯುವಕರ ಸಮಸ್ಯೆಗಳು ಮತ್ತು ಅವರ ಹಕ್ಕುಗಳ ರಕ್ಷಣೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಯುವಜನ ಆಯೋಗ ಸ್ಥಾಪನೆ ಮಾಡುವುದು ಅವಶ್ಯಕವಾಗಿದೆ ಎಂದು ಮುಹಮ್ಮದ್ ಇಸ್ಮಾಯಿಲ್ ಹೇಳಿದರು.
ನಗರದ ಇಸ್ಲಾಮಿಕ್ ಸೆಂಟರ್‌ನಲ್ಲಿ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಹಾಗೂ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಸೌಹಾರ್ದ ಇಫ್ತಾರ್ ಕೂಟ ಮತ್ತು ‘ಯುವಕರ ಧ್ವನಿಯನ್ನು ಬಲಪಡಿಸುವುದು’ ವಿಷಯದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸುಮಾರು 2 ಕೋಟಿ ಯುವಕರು ಇದ್ದಾರೆ. ಅನೇಕ ಯುವಕರು ನಿರುದ್ಯೋಗ, ಸಾಲದ ಸಮಸ್ಯೆ ಹಾಗೂ ದುಷ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕೆಲವರು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೂ ಶರಣಾಗುತ್ತಿದ್ದಾರೆ. ಯುವಕ–ಯುವತಿಯರ ಸಮಸ್ಯೆಗಳನ್ನು ಪರಿಹರಿಸಲು ಯುವಜನ ಆಯೋಗ ರಚನೆಗಾಗಿ ಹೋರಾಟ ಅನಿವಾರ್ಯವಾಗಿದೆ. ರಾಜ್ಯ ಸರ್ಕಾರ ತನ್ನ ಚುನಾವಣಾ ಘೋಷಣೆಯಂತೆ ಈ ಆಯೋಗವನ್ನು ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು.
ಕೃತಕ ಬುದ್ಧಿಮತ್ತೆ (AI) ಪರಿಣಾಮದಿಂದ ಅನೇಕ ಉದ್ಯೋಗಗಳು ನಶಿಸುತ್ತಿರುವ ಹಿನ್ನೆಲೆ ಯುವಕರಿಗೆ ಉದ್ಯೋಗ ಭದ್ರತೆ ಒದಗಿಸುವ ಅಗತ್ಯವಿದೆ. ಯುವಕರ ಅಭಿವೃದ್ಧಿಗಾಗಿ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಯುವಕರಿಂದಲೇ ನಡೆಯಬೇಕು ಎಂದು ಹೇಳಿದರು.
ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಜಿಲ್ಲಾಧ್ಯಕ್ಷ ಡಾ. ವಸೀಂ ಅಹ್ಮದ್ ಮಾತನಾಡಿ, ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಡ್ರಗ್ಸ್ ಹಾವಳಿ ಮತ್ತು ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ. ಇದು ಸಮಾಜಕ್ಕೆ ಮಾರಕವಾಗಿದ್ದು, ಇದರ ವಿರುದ್ಧ ಸಾಲಿಡಾರಿಟಿ ಸಂಘಟನೆ ಹಲವು ಹೋರಾಟಗಳನ್ನು ನಡೆಸಿದೆ ಎಂದು ಹೇಳಿದರು.
ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಶಾಕ್ ಮಾತನಾಡಿ, ಪವಿತ್ರ ರಮಾಝಾನ್ ತಿಂಗಳ ಇಫ್ತಿಯಾರ್ ಕೂಟದ ಮಹತ್ವವನ್ನು ವಿವರಿಸಿದರು.
ಪ್ರಗತಿಪರ ಹೋರಾಟಗಾರರಾದ ಮಹೇಶ್ ಚೀಕಲಪರ್ವಿ ಮತ್ತು ಜೈ ಭೀಮ್ ವಲ್ಲಭ ಯುವಕರ ಸಮಸ್ಯೆಗಳು, ಶಿಕ್ಷಣ ವ್ಯವಸ್ಥೆ, ವೃತ್ತಿ ಕೌಶಲ್ಯ, ಉದ್ಯೋಗಾವಕಾಶಗಳು, ಕಲುಷಿತ ರಾಜಕಾರಣ ಹಾಗೂ ಮತದಾನದ ಮಹತ್ವದ ಕುರಿತು ಮಾತನಾಡಿದರು.
ಸೂರ್ಯಾಸ್ತದ ನಂತರ ಮುಸ್ಲಿಂ ಬಾಂಧವರು ಖರ್ಜೂರ ಹಾಗೂ ನೀರಿನಿಂದ ಉಪವಾಸ ಮುರಿದು ಬಳಿಕ ಸಾಮೂಹಿಕವಾಗಿ ಇಫ್ತಾರ್ ಭೋಜನ ಸೇವಿಸಿದರು. ವಿವಿಧ ಸಮುದಾಯಗಳ ಗಣ್ಯರು ಭಾಗವಹಿಸಿ ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ಸಾರಿದರು.
ಭಾಷಣ ಮಾಡಿದ ಗಣ್ಯರು ರಮಝಾನ್ ತಿಂಗಳು ಸಹನೆ, ದಾನಧರ್ಮ ಮತ್ತು ಮಾನವೀಯತೆಯ ಸಂಕೇತವಾಗಿದ್ದು, ಇಂತಹ ಇಫ್ತಿಯಾರ್ ಕೂಟಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ಬಾಂಧವ್ಯವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಣ್ಣುಗಳು, ಜ್ಯೂಸ್, ಸಮೋಸಾ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.
ಕೆ.ತಾಯಪ್ಪ ರೆಡ್ಡಿ, ರಮೇಶ, ಗೋವಿಂದ, ಈರಪ್ಪ, ಕೆ.ರಾಘವೇಂದ್ರ, ಎಂ ಬಾಬು, ಸಾಲಿಡಾರಿಟಿಯ ಮುಖಂಡ ಸಾದ್ ಮನಿಯಾರ್, ವಿ.ಸಾಗರರೆಡ್ಡಿ, ಎಂ.ಡಿ ಗೌಸ್ ಮೋಯಿನುದ್ದೀನ್, ಫಯಾಜ್ ಅಹ್ಮದ್, ಸಮ್ದಾನಿ,ಮಸ್ರೂರ್ ಅಹ್ಮದ್ ಮತ್ತಿತರರು ಪಾಲ್ಗೊಂಡಿದ್ದರು.







