ರಾಯಚೂರು | ಕ್ರೀಡಾ ಚಟುವಟಿಕೆಯಿಂದ ಆರೋಗ್ಯ ವೃದ್ಧಿ : ಜಿಲ್ಲಾಧಿಕಾರಿ ನಿತಿಶ್ ಕೆ.
ರಾಯಚೂರು : ವರ್ಷವಿಡಿ ಒತ್ತಡದ ಬದುಕಿನಲ್ಲಿ ಕೆಲಸ ಮಾಡುವ ಪೊಲೀಸರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಹೇಳಿದ್ದಾರೆ.
ನಗರದ ಜಿಲ್ಲಾ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಗಳು ದೈಹಿಕ ಮತ್ತು ಆರೋಗ್ಯಕ್ಕೆ ಸಹಕಾರಿಯಾಗಿವೆ. ಪೊಲೀಸರು ನಿತ್ಯದ ಕೆಲಸ ಕಾರ್ಯಗಳಲ್ಲಿ ದಿನ ಕಳೆದು ಹೋಗುತ್ತದೆ. ಕ್ರೀಡೆಗಳ ಹೆಸರಿನಲ್ಲಿ ಎಲ್ಲ ಸಹದ್ಯೋಗಿಗಳನ್ನು ಭೇಟಿ ಮಾಡಿ ಸೌಹಾರ್ದತೆ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆಗಳ ಜಂಟಿ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸುವುದಾಗಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪುಟ್ಟಮಾದಯ್ಯ ಮಾತನಾಡಿ, ಪ್ರತಿವರ್ಷವೂ ವಾರ್ಷಿಕ ಕ್ರೀಡಾಕೂಟಗಳನ್ನು ಪೊಲೀಸ್ ಇಲಾಖೆ ನಡೆಸಿಕೊಂಡು ಬರುತ್ತಿದೆ. ಪೊಲೀಸರು ಸಹ ಉತ್ತಮ ಕ್ರೀಡಾ ಪ್ರತಿಭೆ ಹೊಂದಿದ್ದಾರೆ. ವರ್ಷಕೊಮ್ಮೆ ಸ್ಪರ್ಧೆಗಳು ನಡೆಸುವುದರಿಂದ ಕ್ರೀಡಾ ಚಟುವಟಿಕೆಗಳು ಉತ್ತೇಜಿಸಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ.ಶಿವಕುಮಾರ, ಹರೀಶ ,ಡಿವೈಎಸ್ಪಿ ಸೇರಿ ಜಿಲ್ಲೆಯ ವಿವಿಧ ಠಾಣೆಗಳ ಪಿಐ, ಸಿಪಿಐ, ಪೊಲೀಸರು ಭಾಗವಹಿಸಿದ್ದರು. ಓಟ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡೆಗಳು ನಡೆಯಿತು.