ರಾಯಚೂರು | ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಓಪೆಕ್ ಆಸ್ಪತ್ರೆಯಲ್ಲಿ ʼಕ್ಯಾನ್ಸರ್ ಡೇ ಕೇರ್ ಕಿಮೋಥೆರೆಪಿ ವಿಭಾಗʼ ಪ್ರಾರಂಭ
ರಾಯಚೂರು : ನಗರದ ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಓಪೆಕ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಗೆ ಸಂಬಂಧಪಟ್ಟಂತೆ ಡೇ ಕೇರ್ ಕಿಮೋಥೆರೆಪಿ ವಿಭಾಗವನ್ನು ಪ್ರಾರಂಭ ಮಾಡಲಾಗಿದ್ದು, ಸಾರ್ವಜನಿಕರು ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ರಮೇಶ ಬಿ.ಹೆಚ್. ತಿಳಿಸಿದರು.
ರೀಮ್ಸ್ ನಲ್ಲಿ ಜ.10ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಓಪೆಕ್ ಆಸ್ಪತ್ರೆಯ ಸಹಯೋಗದಲ್ಲಿ ಕ್ಯಾನ್ಸರ್ ಡೇ ಕೇರ್ ಕಿಮೊಥೆರಪಿ ವಿಭಾಗ ಆರಂಭಿದ್ದು, ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಅಲ್ಲದೇ ದೂರದ ಮಹಾನಗರಗಳಿಗೆ ಹೋಗುವುದನ್ನು ತಪ್ಪಿಸಬಹುದು ಎಂದರು.
ಓಪೆಕ್ ಆಸ್ಪತ್ರೆಯ ವಿಶೇಷಾಧಿಕಾರಿ ಡಾ.ರಮೇಶ್ ಸಿ. ಸಾಗರ್ ಅವರು ಮಾತನಾಡಿ, ಕರ್ನಾಟಕದಲ್ಲೇ ಪ್ರಥಮವಾಗಿ ಜಿಲ್ಲಾ ಮಟ್ಟದಲ್ಲಿ ಕ್ಯಾನ್ಸರ್ ಡೇ ಕೇರ್ ಕಿಮೋಥೆರೆಪಿ ವಿಭಾಗವನ್ನು ನಮ್ಮ ಆಸ್ಪತ್ರೆಯಲ್ಲಿ ಪ್ರಾರಂಭ ಮಾಡುತ್ತಿರುವುದು ಸಂತಸದ ವಿಷಯವಾಗಿದೆ. ಕ್ಯಾನ್ಸರ್ ರೋಗವನ್ನು ಮೂರು ವಿಧಾನಗಳಿಂದ ಗುಣಪಡಿಸಬಹುದಾಗಿದ್ದು, ಈಗ ನಮ್ಮ ಆಸ್ಪತ್ರೆಯಲ್ಲಿ ಸರ್ಜಿಕಲ್ ಆಂಕಾಲಜಿಯು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಮೆಡಿಕಲ್ ಆಂಕಾಲಜಿ ಚಿಕಿತ್ಸೆಯನ್ನು ಜ.10ರಿಂದ ಪ್ರಾರಂಭಿಸಲಾಗಿದೆ. ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ರೇಡಿಯೇಷನ್ ಆಂಕಾಲಜಿ ವಿಭಾಗವನ್ನು ಪ್ರಾರಂಭಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಿಮ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಸವರಾಜ ಎಂ.ಪಾಟೀಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಾ.ಸುರೇಂದ್ರಬಾಬು, ಡಾ.ಗಣೇಶ ಅವರು ಉಪಸ್ಥಿತರಿದ್ದರು.