ರಾಯಚೂರಿನಲ್ಲಿ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ

ರಾಯಚೂರು : ಎಡೆದೊರೆ ನಾಡು ರಾಯಚೂರು ಉತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜ.8 ಮತ್ತು 9ರಂದು ಎರಡು ದಿನಗಳ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯುತ್ತಿದ್ದು, ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಬುಧವಾರ ಉದ್ಘಾಟಿಸಿದರು.
ಈ ಕ್ರೀಡಾಕೂಟದಲ್ಲಿ ಪುರುಷರಿಗೆ ಫುಟ್ಬಾಲ್, ವಾಲಿಬಾಲ್, ಕಬಡ್ಡಿ, ಕ್ರಿಕೆಟ್, ಬ್ಯಾಸ್ಕೆಟ್‌ಬಾಲ್ ಸೇರಿದಂತೆ ವಿವಿಧ ಗುಂಪು ಕ್ರೀಡೆಗಳು ಹಾಗೂ ಚೆಸ್, ಓಟ, ಈಜು, ಗುಂಡು ಎಸೆತ ಸೇರಿದಂತೆ ವೈಯಕ್ತಿಕ ಕ್ರೀಡೆಗಳನ್ನು ಆಯೋಜಿಸಲಾಗಿದೆ.
ಮಹಿಳೆಯರಿಗೆ ಕಬಡ್ಡಿ, ಬಾಲ್ ಬ್ಯಾಡ್ಮಿಂಟನ್ ಸೇರಿದಂತೆ ಗುಂಪು ಕ್ರೀಡೆಗಳ ಜೊತೆಗೆ ಚೆಸ್, ರನ್ನಿಂಗ್, ಈಜು, ಗುಂಡು ಎಸೆತ ಸೇರಿದಂತೆ ವೈಯಕ್ತಿಕ ಕ್ರೀಡೆಗಳನ್ನು ಏರ್ಪಡಿಸಲಾಗಿದೆ.
ಜಿಲ್ಲೆಯ ವಿವಿಧ ಇಲಾಖೆಗಳ ಒಟ್ಟು 1,266 ಸರ್ಕಾರಿ ನೌಕರರು ಕ್ರೀಡಾಕೂಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ್ ನಾಯಕ್ ಅವರು ಮಾಹಿತಿ ನೀಡಿದರು.
ಉದ್ಘಾಟನೆಯ ಪೂರ್ವದಲ್ಲಿ 2025–26ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ರಾಯಚೂರು ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ, ಸ್ಪರ್ಧೆಗಳ ನಿಯಮಗಳು ಹಾಗೂ ತೀರ್ಪುಗಾರರ ತೀರ್ಮಾನಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವ ಪ್ರತಿಜ್ಞೆ ಬೋಧಿಸಲಾಯಿತು. ಇದೇ ವೇಳೆ ಮಹಿಳಾ ಕ್ರೀಡಾಪಟುಗಳಿಂದ ಕ್ರೀಡಾಜ್ಯೋತಿ ಪ್ರಜ್ವಲನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಶಾವಂತಗೇರಾ, ರಾಜ್ಯ ಕಾರ್ಯದರ್ಶಿ ಡಾ. ಶಂಕರಗೌಡ ಎಸ್. ಪಾಟೀಲ್, ಮಹಾನಗರ ಪಾಲಿಕೆಯ ಉಪ ಆಯುಕ್ತೆ ಸಂತೋಷರಾಣಿ, ಜಿಲ್ಲಾ ಮುಖಂಡರಾದ ಹಾಜಿಬಾಬು, ದೊಡ್ಡ ನಿಂಗಪ್ಪ, ಭೀಮರಾಜ ಹವಾಲ್ದಾರ್, ಹನುಮಂತ್ರಾಯ, ಆರೀಫ್ ಮಿಯಾ, ಸುರೇಶ್ ಕುರ್ಡಿ, ಪಂಪಾಪತಿ ಹೂಗಾರ, ಭೀಮೇಶ್ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ಬಳಿಕ ವಿವಿಧ ಕ್ರೀಡಾ ಸ್ಪರ್ಧೆಗಳು ಆರಂಭಗೊಂಡವು.







