ರಾಯಚೂರು | ಮಾ.1 ರಂದು ಲಿಂಗಸುಗೂರಿನ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ
ಹೈಕೋರ್ಟ್ ಮುಖ್ಯ ನ್ಯಾಯಾಧೀಶರು, ಸಚಿವರ ಆಗಮನ

ರಾಯಚೂರು : ಮಾ.1 ರಂದು ಲಿಂಗಸುಗೂರು ತಾಲೂಕಿನಲ್ಲಿ ನಿರ್ಮಿಸಿದ ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೊಳ್ಳಲಿದ್ದು, ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ವಿ.ಅಂಜರಿಯಾ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ರಾಜ್ಯದ ವಿವಿಧ ಇಲಾಖೆಯ ಸಚಿವರು ಭಾಗವಹಿಸಲಿದ್ದಾರೆ ಎಂದು ವಕೀಲರ ಸಂಘದ ತಾಲೂಕು ಘಟಕದ ಅಧ್ಯಕ್ಷ ಭೂಪನಗೌಡ ವಿ.ಪಾಟೀಲ್ ತಿಳಿಸಿದರು.
ಲಿಂಗಸೂಗೂರು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ನ್ಯಾಯಾಲಯದ ಕಟ್ಟಡ 40 ವರ್ಷಗಳಷ್ಟು ಹಳೆಯ ಕಟ್ಟಡವಾಗಿತ್ತು. ಸತತ ಪರಿಶ್ರಮದಿಂದ ಬಹುಕೋಟಿ ವೆಚ್ಚದಲ್ಲಿ ಸುಸಜ್ಜಿತ ನೂತನ ನ್ಯಾಯಾಲಯಗಳ ಸಂಕೀರ್ಣವನ್ನು ನಿರ್ಮಾಣ ಮಾಡಲಾಗಿದೆ.
ವಕೀಲರ ಭವನ, ನ್ಯಾಯಾಧೀಶರ ವಸತಿ ಗೃಹವನ್ನು ಒಳಗೊಂಡಿದೆ. ಮುಖ್ಯ ಅತಿಥಿಗಳಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಗೌರವಾನ್ವಿತ ಡಾ.ಶಿವರಾಜ ಪಾಟೀಲ್, ಹೈಕೋರ್ಟ್ ನ ಗೌರವಾನ್ವಿತ ನ್ಯಾಯಾಧೀಶರು ಹಾಗೂ ರಾಯಚೂರಿನ ಆಡಳಿತಾತ್ಮಕ ನ್ಯಾಯಾಧೀಶ ಎಂ.ಜಿ.ಉಮಾ ಆಗಮಿಸಲ್ಲಿದ್ದಾರೆ.
ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೋಳಿ, ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್, ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜ್, ಲೋಕಸಭಾ ಸದಸ್ಯರಾದ ಜಿ.ಕುಮಾರ ನಾಯಕ, ಶಾಸಕರಾದ ಮಾನಪ್ಪ ವಜ್ಜಲ್, ಬಸನಗೌಡ ತುರುವಿಹಾಳ, ವಿಧಾನಪರಿಷತ್ತು ಸದಸ್ಯ ಶರಣಗೌಡ ಪಾಟೀಲ್, ಹೈಕೋರ್ಟ್‌ನ ರಜಿಸ್ಟರ್ ಜನರಲ್ ಕೆ.ಎಸ್.ಭಾರತ ಕುಮಾರ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಅಂದು ಬೆಳಿಗ್ಗೆ ಪ್ರವಾಸಿ ಮಂದಿರದಿಂದ ಕಳಸ ಕುಂಭಗಳ ಮೆರವಣಿಗೆ ಗೌರವಾನ್ವಿತರನ್ನು ಸ್ವಾಗತಿಸಲಾಗುವುದು. ನಂತರ ನೂತನ ನ್ಯಾಯಾಲಯಗಳ ಸಂಕೀರ್ಣ, ವಕೀಲರ ಭವನ, ನ್ಯಾಯಾಧೀಶರ ವಸತಿಗೃಹ ಹಾಗೂ ಇ-ಸೇವಾ ಕೇಂದ್ರದ ಶಂಕುಸ್ಥಾಪನೆಯನ್ನು ನೆರವೇರಿಸಲಾಗುವುದು. ತಾಲೂಕಿನ ನಾಗರಿಕರು, ಸಾಹಿತಿಗಳು, ಚಿಂತಕರು, ವಿವಿಧ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕುಪ್ಪಣ್ಣ ಮಾಣಿಕ್, ಮುದಕಪ್ಪ ವಕೀಲರು, ನಾಗರಾಜ ಗಸ್ತಿ ಸೇರಿ ಉಪಸ್ಥಿತರಿದ್ದರು.







