ರಾಯಚೂರು | ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ: ಮಕ್ಕಳ ರಕ್ಷಣೆಗೆ ಎಸ್ಡಿಎಂಸಿ ಸದಸ್ಯರಿಗೆ ತರಬೇತಿ ನೀಡಲು ಮುಂದಾದ ಇಲಾಖೆ!

ಸಾಂದರ್ಭಿಕ ಚಿತ್ರ | PC : freepik
ರಾಯಚೂರು : ಗ್ರಾಮೀಣ ಮಟ್ಟದಲ್ಲಿ ಹೆಚ್ಚುತ್ತಿರುವ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಮಕ್ಕಳ ರಕ್ಷಣೆ ಕುರಿತಂತೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಾಲಾ ಮೇಲುಸ್ತುವಾರಿ ಸಮಿತಿಗಳ ಸದಸ್ಯರಿಗೆ ಎರಡು ದಿನಗಳ ತರಬೇತಿ ನೀಡಲು ಇಲಾಖೆ ಯೋಚಿಸಿದೆ.
ಬಾಲಕಾರ್ಮಿಕತೆ, ಬಾಲ್ಯವಿವಾಹ, ಪೋಕ್ಸೋ ಕಾಯ್ದೆ ಹಾಗೂ ಮಕ್ಕಳ ಸುರಕ್ಷತೆಯ ಕುರಿತಾಗಿ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ತರಬೇತಿ ನೀಡುವ ಮೂಲಕ ಗ್ರಾಮ ಮಟ್ಟದಲ್ಲಿಯೇ ನಿಗಾವಹಿಸುವ ಇಲಾಖೆ ತರಬೇತಿ ನಿಗಧಿಪಡಿಸಿ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ನ.3 ಮತ್ತು 11 ರಂದು ತರಬೇತಿಯನ್ನು ನಿಗಧಿಪಡಿಸಿ ಆದೇಶಿಸಲಾಗಿದ್ದು, ಮಕ್ಕಳ ರಕ್ಷಣೆ ಶಾಲಾ ಮೇಲುಸ್ತುವಾರಿ ಸಮಿತಿಗಳ ಹೊಣೆಗಾರಿಕೆಯನ್ನು ಜಾಗೃತಗೊಳಿಸಲು ಉದ್ದೇಶಿಸಲಾಗಿದೆ. ಮಕ್ಕಳ ರಕ್ಷಣೆಗೆ ಅನೇಕ ಕಾಯ್ದೆಗಳು, ಮಕ್ಕಳ ರಕ್ಷಣಾ ಘಟಕಗಳು ಸೇರಿದಂತೆ ಪ್ರತ್ಯೇಕ ಯೋಜನೆಗಳು ಅನುಷ್ಟಾನಗೊಳಿಸಲಾಗಿದ್ದರೂ ನಿರೀಕ್ಷಿತ ಫಲಿತಾಂಶ ದೊರೆಯುತ್ತಿಲ್ಲ. ವಿಶೇಷವಾಗಿ ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಅಪೌಷ್ಟಿಕತೆ, ರಕ್ತ ಹೀನತೆ ಸೇರಿ ಅನೇಕ ಆರೋಗ್ಯ ಸಮಸ್ಯೆಗಳೊಂದಿಗೆ ಶಾಲೆಯಿಂದ ಹೊರಗುಳಿಯುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಳವಾಗುತ್ತಿರುವುದನ್ನು ಮನಗಂಡಿರುವ ಇಲಾಖೆ ಎಸ್ಡಿಎಂಸಿ ಸದಸ್ಯರಿಗೆ ತರಬೇತಿ, ಕಾನೂನಿನ ಜಾಗೃತಿ ಮೂಡಿಸಲು ಮೊದಲ ಆದ್ಯತೆಯಾಗಿ ಎರಡು ಪ್ರತ್ಯೇಕ ತರಬೇತಿಗಳನ್ನು ನೀಡುವ ಆಯಾ ಜಿಲ್ಲೆಯ ಶಾಲಾ ಸಂಖ್ಯೆವಾರು ಅನುದಾನವನ್ನು ಹಂಚಿಕೆ ಮಾಡಲಾಗಿದೆ.
ಎಸ್ಡಿಎಂಸಿ ಸದಸ್ಯರಿಗೆ ಎರಡು ಸಭೆ ಸೇರಿ(ಒಂದು ಸಾವಿರ ರೂ ಗೌರವ ಧನ) ನೀಡಲು ಸಹ ಅನುದಾನ ಹಂಚಿಕೆ ಮಾಡಲಾಗಿದೆ. ಪ್ರತಿ ಶಾಲೆಯಿಂದಲೇ ಮಕ್ಕಳ ರಕ್ಷಣೆಗೆ ಬೇಕಿರುವ ಸಿದ್ದತೆಗಳನ್ನು ಪ್ರಾರಂಭಿಸಲು ಸೂಚಿಸಲಾಗಿದೆ. ಶಾಲೆಯಿಂದ ಹೊರಗುಳಿಯಲು ಕಾರಣಗಳನ್ನು ಕಂಡುಕೊಳ್ಳುವ ಜೊತೆಗೆ ಮಕ್ಕಳ ಹಕ್ಕುಗಳು, ರಕ್ಷಣೆ ಇರುವ ಕಾನೂನಿನ ಕೈಪಿಡಿಯನ್ನು ಸದಸ್ಯರಿಗೆ ತಲುಪಿಸುವ ಮೂಲಕ ಜವಬ್ದಾರಿಯನ್ನು ಜಾಗೃತಿಗೊಳಿಸುವ ಉದ್ದೇಶ ಹೊಂದಲಾಗಿದೆ.
ಆಯಾ ಶಾಲೆಯ ಮುಖ್ಯಶಿಕ್ಷಕರು ಎರಡು ತರಬೇತಿಗಳಿಗೆ ಸಿದ್ದತೆ ಕೈಗೊಂಡು ಬಳಕೆಯಾದ ಅನುದಾನ ಪ್ರಮಾಣ ಪತ್ರವನ್ನು ಸಹ ಇಲಾಖೆ ಸಲ್ಲಿಸುವ ಷರತ್ತಿನೊಂದಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ.
ಬಾಲ್ಯವಿವಾಹ, ಬಾಲಕಾರ್ಮಿಕತೆ, ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ಎಸ್ಡಿಎಂಸಿ ಸಮಿತಿಯೇ ಮೇಲುಸ್ತುವಾರಿ ಮಾಡುವ ಮೂಲಕ ನಿಯಂತ್ರಣಕ್ಕೆ ಸಿದ್ದತೆಗಳು ಪ್ರಾರಂಭವಾಗಿವೆ. ಎಸ್ಡಿಎಂಸಿ ಸಮಿತಿ ತರಬೇತಿ ಹಾಗೂ ಗ್ರಾಮ ಮಟ್ಟದಲ್ಲಿ ನಡೆಯುವ ಮಕ್ಕಳ ಮೇಲೆ ದೌರ್ಜನ್ಯ ತಡೆಯಲು ಮುಂದಾಗುತ್ತದೆ ಎಂಬುದು ಕೂತುಹಲದ ನಿರೀಕ್ಷೆಯಾಗಿದೆ.







