ರಾಯಚೂರು | ಪರಿಶಿಷ್ಟ ಜಾತಿ ಒಳ ಮೀಸಲಾತಿ ಹಂಚಿಕೆಯಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯ : ರವೀಂದ್ರ ಜಲ್ದಾರ್

ರಾಯಚೂರು : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಯಲ್ಲಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ತೀರ್ಪನ್ನು ಸಮರ್ಪಕವಾಗಿ ಪಾಲಿಸದೆ ಗೊಂದಲ ಸೃಷ್ಟಿಸಿದೆ ಎಂದು ಮಾದಿಗ, ಸಮಗಾರ, ಡೋಹರ ಮತ್ತು ಡಕ್ಕಲಿಗ ಉಪಜಾತಿ ಸಂಘಟನೆಗಳ ಒಕ್ಕೂಟದ ಸಂಚಾಲಕ ರವೀಂದ್ರ ಜಲ್ದಾರ್ ಆರೋಪಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಹಂಚಿಕೆ ಮಾಡುವಂತೆ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ಶಿಫಾರಸ್ಸು ಮಾಡಿತ್ತು. ಆದರೆ ಸರ್ಕಾರ ಈ ಶಿಫಾರಸ್ಸುಗಳನ್ನು ಜಾರಿಗೊಳಿಸದೆ, ತಾನೇ ತನಗೆ ಇಷ್ಟ ಬಂದಂತೆ ಮೀಸಲಾತಿ ಹಂಚಿಕೆ ಮಾಡಿ ಸಾಮಾಜಿಕ ನ್ಯಾಯ ನೀಡಿದ್ದೇನೆ ಎಂದು ಹೇಳುತ್ತಿರುವುದು ಹಸಿ ಸುಳ್ಳು ಎಂದು ಕಿಡಿಕಾರಿದರು.
ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗವು ಮಾದಿಗರಿಗೆ 6, ಛಲವಾದಿ ಸಂಬಂಧಿತ ಜಾತಿಗಳಿಗೆ 5, ಬೋವಿ-ಲಂಬಾಣಿ ಸೇರಿದಂತೆ ಇತರರಿಗೆ 4 ಹಾಗೂ ಅಲೆಮಾರಿಗಳಿಗೆ 1ರ ಅನುಪಾತದಲ್ಲಿ ಮೀಸಲು ಹಂಚಿಕೆ ಮಾಡಲು ಸೂಚಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರವು ರಾಜಕೀಯ ಒತ್ತಡಕ್ಕೆ ಮಣಿದು ಮಾದಿಗ ಮತ್ತು ಛಲವಾದಿ ಸಮುದಾಯಗಳಿಗೆ ತಲಾ 6 ರಂತೆ ಸಮಾನ ಮೀಸಲು ನಿಗದಿಪಡಿಸಿದೆ. ಇದರಿಂದ ಮಾದಿಗ ಸಂಬಂಧಿತ ಜಾತಿಗಳಿಗೆ ಘೋರ ಅನ್ಯಾಯವಾಗಿದೆ ಎಂದು ಅವರು ದೂರಿದರು.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳಿದ್ದರೂ ಕೇವಲ 98 ಜಾತಿಗಳಿಗೆ ಮಾತ್ರ ಮೀಸಲು ಹಂಚಿಕೆ ಮಾಡಲಾಗಿದೆ. ಮಾದಿಗ ಸಂಬಂಧಿತ 29 ಉಪಜಾತಿಗಳ ಪೈಕಿ ಕೇವಲ 16 ಜಾತಿಗಳನ್ನು ಪ್ರವರ್ಗ-1ರಲ್ಲಿ ಪರಿಗಣಿಸಲಾಗಿದೆ. ಅರುಂಧತಿಯಾರ್, ಭಂಗಿ, ದಕ್ಕಲಿಗ ಸೇರಿದಂತೆ 13 ಜಾತಿಗಳನ್ನು ಪ್ರವರ್ಗ-3ಕ್ಕೆ ಸೇರಿಸಿ ಅಲೆಮಾರಿಗಳಿಗೆ ಮೀಸಲು ಸಿಗದಂತೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಮಾದಿಗ ದಂಡೋರ ಸಮಿತಿ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ಮಾತನಾಡಿ, ಸರ್ಕಾರವು ಯಾವುದೇ ವೈಜ್ಞಾನಿಕ ವಿಶ್ಲೇಷಣೆಯಿಲ್ಲದೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮೀಸಲು ಹಂಚಿಕೆ ಮಾಡಿದೆ. ಮಾಹಿತಿ ಕೊರತೆಯಿಂದಾಗಿ ಕೆಲವರು ಇದನ್ನು ಸ್ವಾಗತಿಸುತ್ತಿರಬಹುದು, ಆದರೆ ವಾಸ್ತವದಲ್ಲಿ ಸಮಾಜಕ್ಕೆ ದೊಡ್ಡ ಅನ್ಯಾಯವಾಗಿದೆ. ಈ ಕೂಡಲೇ ಲೋಪಗಳನ್ನು ಸರಿಪಡಿಸದಿದ್ದರೆ ರಾಜ್ಯಾದ್ಯಂತ ಎರಡನೇ ಹಂತದ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ಭೀಮಣ್ಣ ಮಂಚಾಲ, ಚಂದ್ರ ಭಂಡಾರಿ, ಭೀಮಯ್ಯ, ಜೆ.ಮೌನೇಶ, ಆಂಜನೇಯ, ಲಕ್ಷ್ಮಣ ಸೇರಿದಂತೆ ಇತರರು ಉಪಸ್ಥಿತರಿದ್ದರು.







