ರಾಯಚೂರು | ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ನೆರೆಹೊರೆಯವರ ಹಕ್ಕುಗಳ ಕುರಿತು ಅಭಿಯಾನ

ಮಾನ್ವಿ: ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ನ.21 ರಿಂದ ನ.30ರವರೆಗೆ ರಾಷ್ಟ್ರವ್ಯಾಪಿಯಾಗಿ ನೆರೆಹೊರೆಯವರ ಹಕ್ಕುಗಳು, ಮಾದರಿ ನೆರೆಹೊರೆ ಮಾದರಿ ಸಮಾಜ ಎನ್ನುವ ಘೋಷವಾಕ್ಯದೊಂದಿಗೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮಾನ್ವಿ ತಾಲೂಕು ಅಧ್ಯಕ್ಷ ಅಬ್ದುಲ್ ರೆಹಮಾನ್ ತಿಳಿಸಿದರು.
ಮಾನ್ವಿ ಪಟ್ಟಣದ ಪತ್ರಿಕಾ ಭವನದಲ್ಲಿ ಮಾತನಾಡಿದ ಅಬ್ದುಲ್ ರೆಹಮಾನ್, ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಮುಸ್ಲಿಂ ಸಮಾಜದ ಸುಧಾರಣೆಯ ದೃಷ್ಟಿಯಿಂದ ಅಭಿಯಾನ ಆಯೋಜಿಸಲಾಗಿದೆ ಎಂದು ಹೇಳಿದರು.
ಜಮಾಅತೆ ಇಸ್ಲಾಮಿ ಹಿಂದ್ ಮಾನ್ವಿ ತಾಲೂಕು ಘಟಕದಿಂದ ಮಾನ್ವಿ ಪಟ್ಟಣದಲ್ಲಿ ನ.21 ಹಾಗೂ 28 ರಂದು ಭಾಷಣ ಕಾರ್ಯಕ್ರಮ, ನ.22 ರಂದು ಎಸ್.ಐ.ಓ. ಜಿ.ಐ.ಓ. ಹಾಗೂ ಸಿ.ಐ.ಓಗಳ ಸಹಯೋಗದಲ್ಲಿ ಸಾಂಸ್ಕೃತಿಕ ಹಬ್ಬ ಆಚರಣೆ, ನ.23 ರಿಂದ 26 ರವರೆಗೆ ನೆರೆಹೊರೆಯವರೊಂದಿಗೆ ಸೌಹಾರ್ಧತೆಗಾಗಿ ಚಹಾಕೂಟ, ಭೋಜನಾ ಕೂಟ, ಉಡುಗೊರೆಗಳ ವಿನಿಮಯ ಕಾರ್ಯಕ್ರಮ ನಡೆಯಲಿದೆ. ನ.27ರಂದು ಮಹಿಳೆಯರಿಗಾಗಿ ವಿಶೇಷ ಸಾಂಸ್ಕೃತಿಕ ದಿನಾಚರಣೆ, ನ.29ರಂದು ಸ್ವಚ್ಚತೆ ಕುರಿತು ರ‍್ಯಾಲಿ ನಡೆಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಜಮಾಅತೆ ಇಸ್ಲಾಮಿ ಹಿಂದ್ ರಾಯಚೂರು ಜಿಲ್ಲಾ ಸಂಚಾಲಕರಾದ ಅಬ್ದುಲ್ ಕರೀಮ್ ಖಾನ್, ಮುಹಮ್ಮದ್ ದಾವೂದ್ ಸಿದ್ದಿಖಿ, ಎಮ್.ಎ. ಹೆಚ್. ಮುಖೀಮ್, ಅಬ್ದುಲ್ ರೌಫ್ , ಮಾಧ್ಯಮ ಕಾರ್ಯದರ್ಶಿ ಉಮರ್ ಫಾರೂಖ್ ದೇವರಮನಿ ಉಪಸ್ಥಿತರಿದ್ದರು.







