ರಾಯಚೂರು | ಜಿಲ್ಲಾಡಳಿತದಿಂದ ಕಾಯಕ ಶರಣರ ಜಯಂತಿ ಆಚರಣೆ
ಸಮಸಮಾಜ ಕಟ್ಟುವಲ್ಲಿ ಕಾಯಕ ಶರಣರ ಕೊಡುಗೆ ಅಪಾರ : ಸುರೇಶ್ ವರ್ಮ

ರಾಯಚೂರು : ಮೂಢನಂಬಿಕೆಗಳು, ಜಾತಿ ಪದ್ಧತಿ, ಅಸಮಾನತೆಯ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಸಮಾಜ ಕಟ್ಟುವಲ್ಲಿ ಕಾಯಕ ನಿಷ್ಠೆ ಮೆರೆದ ಕಾಯಕ ಶರಣರ ಕೊಡುಗೆ ಅಪಾರ ಎಂದು ರಾಯಚೂರು ತಹಶೀಲ್ದಾರ್ ಸುರೇಶ ವರ್ಮ ಅವರು ಹೇಳಿದರು.
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಇಂದು ಆಯೋಜಿಸಿದ್ದ ʼಕಾಯಕ ಶರಣರ ಜಯಂತಿʼ ಉದ್ಘಾಟಿಸಿ ಅವರು ಮಾತನಾಡಿದರು.
ಸರಳ ಜೀವನ, ಶುದ್ಧ ಧ್ಯಾನ, ನಿಷ್ಕಲ್ಮಶ ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯವೆಂದು ಸಾರಿದ ಕಾಯಕ ಶರಣರ ವಚನಗಳು ಇಂದಿಗೂ ಚಿರಪರಿಚಿತವಾಗಿವೆ. 12ನೇ ಶತಮಾನವು ಧಾರ್ಮಿಕ, ಸಾಮಾಜಿಕ, ರಾಜಕೀಯವಾಗಿ ಕ್ರಾಂತಿ ಉಂಟುಮಾಡಿದೆ. ಇವತ್ತಿನ ನಮ್ಮ ಸಂವಿಧಾನದ ಪಾರ್ಲಿಮೆಂಟ್ ಮಾದರಿಯಲ್ಲಿ ಅಂದಿನ ಅನುಭವ ಮಂಟಪ ಇತ್ತು. ಯಾರನ್ನೂ ಕೀಳಾಗಿ ಕಾಣಬಾರದು ಎಂಬುವುದು ಬಸವೇಶ್ವರರ ಸಮಾನತೆಯ ತತ್ವವಾಗಿದ್ದು, ಅವರ ಹಾದಿಯಲ್ಲಿ ನಡೆದ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿಯವರು ಶರಣ ಪಡೆಯ ಮಹನೀಯರಾಗಿದ್ದಾರೆ ಎಂದು ಹೇಳಿದರು.
ಈ ವೇಳೆ ಸಾಹಿತಿಗಳಾದ ವೀರಹನುಮಾನ್ ಅವರು ಉಪನ್ಯಾಸಕರಾಗಿ ಮಾತನಾಡಿ, ಶರಣದ ವಚನಗಳು ಇಂದಿನ ಆಧುನಿಕ ಯುಗದಲ್ಲಿ ಅತ್ಯವಶ್ಯಕವಾಗಿವೆ. ಯುವ ಪೀಳಿಗೆ ಅವರ ಆದರ್ಶಗಳನ್ನು ಪಾಲಿಸಿ ಮುನ್ನಡೆಯಬೇಕಿದೆ ಎಂದು ತಿಳಿಸಿದರು.
ಇದಕ್ಕೂ ಮುಂಚೆ ಕಾರ್ಯಕ್ರಮದಲ್ಲಿ ಮಾದರ ಚನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ ಕಾಯಕ ಶರಣರ ಭಾವಚಿತ್ರಕ್ಕೆ ವಿವಿಧ ಗಣ್ಯರು ಪುಷ್ಪಾರ್ಚನೆ ಮಾಡಿದರು.
ಇದೇ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ರಾಯಚೂರು ತಾಲೂಕು ಗ್ರೇಡ್-2 ತಹಶೀಲ್ದಾರ್ ಭೀಮರಾಯ ಸೇರಿದಂತೆ ವಿವಿಧ ಮುಖಂಡರು ಇದ್ದರು.







