ರಾಯಚೂರು | ಆಡಳಿತದ ನಾಲ್ಕನೇ ಅಂಗವಾಗಿ ಪತ್ರಿಕೋದ್ಯಮ ಪ್ರಮುಖ ಪಾತ್ರ ವಹಿಸಿದೆ: ಆಯುಕ್ತ ಜುಬಿನ್ ಮೊಹಪಾತ್ರ

ರಾಯಚೂರು : ಆಡಳಿತದ ಲೋಪದೋಷಗಳನ್ನು ಯಾವುದೇ ಮುಲಾಜಿಲ್ಲದೆ ಬಯಲಿಗೆಳೆಯುವ ಮೂಲಕ ಆಡಳಿತ ವ್ಯವಸ್ಥೆಯ ನಾಲ್ಕನೇ ಅಂಗವಾಗಿ ಪತ್ರಿಕೋದ್ಯಮ ಹೊರಹೊಮ್ಮಿದೆ ಎಂದು ರಾಯಚೂರು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ–2026ರ ಅಂಗವಾಗಿ ನಗರದ ಮಹಿಳಾ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಜ್ಞಾನಪ್ರವಾಹ ಮತ್ತು ಪತ್ರಿಕೋದ್ಯಮದ ಮಹತ್ವವನ್ನು ವಿವರಿಸಿದರು.
ಮುದ್ರಣ ಯಂತ್ರದ ಆವಿಷ್ಕಾರದ ನಂತರ ವಿದ್ಯೆಯ ಪ್ರಸಾರ ವೇಗ ಪಡೆದಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪತ್ರಿಕೆಗಳು ವಹಿಸಿದ ಪಾತ್ರ ಶ್ಲಾಘನೀಯವಾಗಿದೆ. ಬ್ರಿಟಿಷ್ ಆಡಳಿತದ ವಿರುದ್ಧ ಧ್ವನಿ ಎತ್ತಿದ ಅನೇಕ ಪತ್ರಕರ್ತರು ಹಿಂಸೆಗೆ ಒಳಗಾದ ಘಟನೆಯನ್ನು ಸ್ಮರಿಸಿದ ಅವರು, ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಫೇಕ್ ನ್ಯೂಸ್ ಹಿನ್ನೆಲೆಯಲ್ಲಿ ಪತ್ರಕರ್ತರು, ವಿಶೇಷವಾಗಿ ಮುದ್ರಣ ಮಾಧ್ಯಮದವರು ಹೆಚ್ಚಿನ ಎಚ್ಚರಿಕೆ ವಹಿಸಿ, ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಪ್ರಕಟಿಸಬೇಕು ಎಂದು ಮನವಿ ಮಾಡಿದರು.
ರಾಯಚೂರು ಜಿಲ್ಲಾ ಉತ್ಸವ ಯಶಸ್ವಿಯಾಗಿ ನಡೆಯಲು ಹಾಗೂ ಜನಪ್ರಿಯವಾಗಲು ಮಾಧ್ಯಮದ ಪಾತ್ರ ಮಹತ್ವದ್ದಾಗಿದೆ. ಅದೇ ರೀತಿ ನಗರ ಸ್ವಚ್ಛತೆಯ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಕೈಗೊಂಡಿರುವ ದಿಟ್ಟ ಕ್ರಮಗಳಿಗೆ ಪತ್ರಿಕಾ ಮಾಧ್ಯಮಗಳು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಅವರು ಕೋರಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಯಚೂರು ವಾಣಿ ಸಂಪಾದಕ ಅರವಿಂದ ಕುಲಕರ್ಣಿ ಅವರು, ಉತ್ತಮ ಅಧಿಕಾರಿಗಳು ಬಂದಾಗ ಉತ್ತಮ ಕಾರ್ಯಗಳು ನಡೆಯುತ್ತವೆ ಮತ್ತು ಅವು ಚಿರಕಾಲ ಉಳಿಯುತ್ತವೆ ಎಂದು ಹೇಳಿದರು.
ಕಂಪಿಲವಾಣಿ ಸಂಪಾದಕ ಭೀಮರಾಯ ಹದ್ದಿನಾಳ ಅವರು ಪತ್ರಕರ್ತರು ಮತ್ತು ಮಾಧ್ಯಮಗಳ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ವಿವರಿಸಿ, ಎದುರಾಗಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಗುರುನಾಥ ಅವರು ವಹಿಸಿದ್ದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಕಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಿದ್ದಯ್ಯಸ್ವಾಮಿ ನಿರೂಪಣೆ ಮಾಡಿದರು. ವಾರ್ತಾಧಿಕಾರಿ ಗವಿಸಿದ್ದಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.






