ರಾಯಚೂರು | ಸಿಂಧನೂರಿಗೆ ಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

ರಾಯಚೂರು : ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಇನ್ಸುಲಿನ್ ಸಿಗದಿರುವುದರಿಂದ ಮಗಳ ಚಿಕಿತ್ಸೆಗೆ ತಿಂಗಳಿಗೆ 5 ಸಾವಿರ ರೂ. ವೆಚ್ಚವಾಗುತ್ತಿದ್ದು, ಇದು ಬಡ ಕುಟುಂಬಕ್ಕೆ ಭಾರವಾಗುತ್ತಿದೆ ಎಂದು ಸಿಂಧನೂರ ತಾಲೂಕಿನ ಕುರಕುಂದ ಗ್ರಾಮದ ಗುಡದಪ್ಪ ಎಂಬುವವರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರ ಮುಂದೆ ಅಳಲು ತೋಡಿಕೊಂಡರು.
ಸಿಂಧನೂರಿನ ಟೌನ್ ಹಾಲ್‌ನಲ್ಲಿ ಸೆ.18 ರಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಗಳೊಂದಿಗೆ ಆಗಮಿಸಿದ್ದ ಗುಡದಪ್ಪ ಅವರು ಕಾರ್ಯಕ್ರಮದ ಮಧ್ಯೆ ವೇದಿಕೆಗೆ ಬಂದು ವಿಷಯ ಪ್ರಸ್ತಾಪಿಸಿದರು. ಶುಗರ್ ಪರೀಕ್ಷೆಗೆ ಸೂಜಿ, ಪಿನ್ ಖರೀದಿ ಹಾಗೂ ಇನ್ಸುಲಿನ್ ಖರೀದಿಗೆ ತಿಂಗಳಿಗೆ 5 ಸಾವಿರ ರೂ. ಖರ್ಚಾಗುತ್ತದೆ. ಬಡವರಾದ ನಮಗೆ ಇದು ದೊಡ್ಡ ಆರ್ಥಿಕ ಹೊರೆ ಎಂದು ವಿವರಿಸಿದರು.
ಡಾ.ನಾಗಲಕ್ಷ್ಮಿ ಅವರು ಮದುಮೇಹ ಪೀಡಿತ ಬಾಲಕಿಯೊಂದಿಗೆ ಮಾತನಾಡಿ, ಅವಳ ಆರೋಗ್ಯ ವಿಚಾರಿಸಿದರು. ಏಳನೇ ವಯಸ್ಸಿನಲ್ಲಿ ನನಗೆ ಮದುಮೇಹ ಬಂದಿದೆ. ಈಗ ನಾನು 10ನೇ ತರಗತಿಯಲ್ಲಿ ಓದುತ್ತಿದ್ದೇನೆ ಎಂದು ವಿದ್ಯಾರ್ಥಿನಿ ತಿಳಿಸಿದಳು. ತಕ್ಷಣವೇ ಸಿಂಧನೂರ ತಾಲೂಕು ವೈದ್ಯಾಧಿಕಾರಿಯನ್ನು ವೇದಿಕೆಗೆ ಕರೆಸಿದ ಅಧ್ಯಕ್ಷೆ, ಸಮಸ್ಯೆಯನ್ನು ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ತಾಲೂಕು ಆರೋಗ್ಯಾಧಿಕಾರಿ, ವಿದ್ಯಾರ್ಥಿನಿ ಹಾಗೂ ಅವಳ ಪಾಲಕರನ್ನು ಆಸ್ಪತ್ರೆಗೆ ಕರೆಸಿ ಮದುಮೇಹ ಚಿಕಿತ್ಸೆಗೆ ಉಚಿತ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಿಂಧನೂರಿನಲ್ಲಿ ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಆಶ್ರಯದಲ್ಲಿ ನಡೆದ ಈ ಸಂವಾದದಲ್ಲಿ ಮಾಜಿ ದೇವದಾಸಿ ಮಹಿಳೆಯರು, ಸಿಂದೋಲ ಸಮುದಾಯದ ಅಲೆಮಾರಿ ಮಹಿಳೆಯರು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ತಮ್ಮ ದೂರು ಅರ್ಜಿಗಳನ್ನು ಅಧ್ಯಕ್ಷೆಗೆ ಸಲ್ಲಿಸಲು “ನಾ ಮುಂದೆ, ತಾ ಮುಂದೆ” ಎಂದು ಜನರು ಟೌನ್ ಹಾಲ್‌ನಲ್ಲಿ ದುಂಬಾಲು ಬಿದ್ದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟು ಜನರನ್ನು ವೇದಿಕೆಯಿಂದ ಕೆಳಗಿಳಿಸಿದರು.







