ರಾಯಚೂರು| ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕೆ.ಶಾಂತಪ್ಪ ಪದಗ್ರಹಣ

ರಾಯಚೂರು: ಜಿಲ್ಲಾ ಕಾಂಗ್ರೆಸ್ ನ ನೂತನ ಅಧ್ಯಕ್ಷರಾದ ಕೆ.ಶಾಂತಪ್ಪ ಅವರು ಹಿರಿಯರಾಗಿ ಅನೇಕ ಹುದ್ದೆ ನಿಭಾಯಿಸಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಪಕ್ಷ ಸಂಘಟನೆ ಮಾಡಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಅವರಿಗೆ ಸಹಕಾರ ನೀಡಬೇಕು ಎಂದು ಮಾಜಿ ಸಚಿವ ಎನ್ ಎಸ್ ಬೋಸರಾಜು ಹೇಳಿದರು.
ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ರವಿವಾರ ಆಯೋಜಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಅವರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎನ್ ಎಸ್ ಬೋಸರಾಜು, ಎಐಸಿಸಿ ವರ್ಕಿಂಗ್ ಕಮಿಟಿಯ ಬೆಳಗಾವಿ ಅಧಿವೇಶನದಲ್ಲಿ ಅಧ್ಯಕ್ಷ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲು ಕಠಿಣ ನಿಯಮ ರೂಪಿಸಲು ನಿರ್ಧಾರಿಸಿದರು.ಕಾರ್ಯಕರ್ತರ, ಮುಖಂಡರ, ಜನರ ಅಭಿಪ್ರಾಯ ಪಡೆದು ನೇಮಕಾತಿಗೆ ವೀಕ್ಷಕರ ನೇಮಕ ಮಾಡಿ ನ್ಯಾಯಬದ್ಧವಾಗಿ ಅರ್ಹತೆಯ ಆಧಾರದ ಮೇಲೆ ಅಧ್ಯಕ್ಷರ ನೇಮಕ ಮಾಡಿದ್ದಾರೆ.
ಕೆ.ಶಾಂತಪ್ಪ ಅವರು ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದು, ಅವರು ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಲಿದ್ದಾರೆ. ನಾವೆಲ್ಲರೂ ಅವರಿಗೆ ಸಹಕಾರ ನೀಡುತ್ತೇವೆ. ಹಿರಿಯರಾಗಿ ಅನುಭವ ಹೊಂದಿದ್ದು ಚೆನ್ನಾಗಿ ನಿಭಾಯಿಸಲಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ ಮಾತನಾಡಿ, ಕೆ.ಶಾಂತಪ್ಪ ಅವರು ನಾನು ಒಂದೇ ಕಾಲದಲ್ಲಿ ಅವರ ಜೊತೆ ರಾಜಕೀಯಕ್ಕೆ ಬಂದಿದ್ದೇವೆ, ಪಕ್ಷ ತನ್ನದೇ ಆದ ಸುದೀರ್ಘ ಇತಿಹಾಸ ಹೊಂದಿದೆ. ದೇಶದ ಸ್ವಾತಂತ್ರ್ಯ ಚಳವಳಿಯಿಂದ ಆರಂಭವಾಗಿ ಈಗ ಹೆಮ್ಮರವಾಗಿ ಬೆಳೆದಿದೆ ಎಂದು ಹೇಳಿದರು.
ನೂತನ ಜಿಲ್ಲಾ ಅಧ್ಯಕ್ಷ ಶಾಂತಪ್ಪ ಅವರು ಮಾತನಾಡಿ, ನಾನೂ ರಾಜೇಂದ್ರ ಗಂಜ್ ನಲ್ಲಿ ಗುಮಾಸ್ತನಾಗಿ ಕೆಲಸ ಮಾಡಿ ಯುವಕರ ಕ್ರೀಡಾ ಕ್ಲಬ್ ಮಾಡಿ ಅನೇಕ ಸಮುದಾಯಗಳ ಜೊತೆ ಸೌಹಾರ್ದವಾಗಿ ಕೆಲಸ ಮಾಡಿದ್ದೇನೆ. ದಿವಂಗತ ಎಂ.ಈರಣ್ಣನವರು ನನಗೆ ರಾಜಕೀಯಕ್ಕೆ ಕರೆ ತಂದವರು, ಅಂದಿನಿಂದ 40 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿದ್ದೇನೆ. ನಗರಸಭೆ ಸದಸ್ಯನಾಗಿ, ಎಪಿಎಂಸಿ ಅಧ್ಯಕ್ಷನಾಗಿ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದೇನೆ. ನಾನೂ ವೇದಿಕೆಯಲ್ಲಿ ಕುಳಿತವನಲ್ಲ, ವೇದಿಕೆಯ ಹಿಂದೆ ಕೆಲಸ ಮಾಡಿದವನು, ಸುದೀರ್ಘ ಕಾಲದವರೆಗೆ ರಾಜಕೀಯದಲ್ಲಿದ್ದು ನನ್ನ ಮುಂದೆಯೇ ವಿಧಾನ ಪರಿಷತದ ಸದಸ್ಯರಾದ ಎನ್ ಎಸ್ ಬೋಸರಾಜು, ವೆಂಕಟೇಶ ನಾಯಕ, ಎ. ವಸಂತ ಕುಮಾರ, ಬಿ.ವಿ.ನಾಯಕ, ರಾಮಣ್ಣ ಇರಬೇರಾ ಸೇರಿ ಹಾಲಿ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿಯವರವರೆಗೆ 8 ಜನ ಅಧ್ಯಕ್ಷರಾಗಿದ್ದಾರೆ. ನನಗೆ ಅಧ್ಯಕ್ಷ ಸ್ಥಾನ ಸಿಗದಿದ್ದರೂ ನಿರಾಶೆಯಾಗಿಲ್ಲ, ಪಕ್ಷಕ್ಕೆ ದುಡಿದ ನಿಷ್ಠಾವಂತರಿಗೆ ಸ್ಥಾನಮಾನ ಸಿಗುತ್ತೆ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದರು.
ನಾನು ಅಧ್ಯಕ್ಷರಾಗಿ ಎಲ್ಲಾ ನಾಯಕರ ಬಳಿ, ಕಾರ್ಯಕರ್ತರ ಮನೆ ಬಾಗಿಲಿಗೆ ಹೋಗುವೆ, ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದೆ ಎನ್ನುವುದು ನಿಜ, ಪಕ್ಷದ ವಿಚಾರ ಬಂದಾಗ ಎಲ್ಲರೂ ಒಂದಾಗಬೇಕು. ಹಿರಿಯರು, ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವೆ. ಯುವಕರಿಗೆ ಶಕ್ತಿ ತುಂಬಬೇಕು ಎಂದು ಹೇಳಿದರು.
ಈ ವೇಳೆ ಹಂಪಯ್ಯ ನಾಯಕ ಸಾಹುಕಾರ್, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ಶರಣಪ್ಪ ಮಟ್ಟೂರು, ರಾಯಚೂರು ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮೊಹಮ್ಮದ್ ಶಾಲಂ, ರಾಮಣ್ಣ ಇರಬಗೇರಾ, ಮಲ್ಲಿಕಾರ್ಜುನ ಪಾಟೀಲ ಎಪಿಎಂಸಿ ಅಧ್ಯಕ್ಷ, ಬಾಲಸ್ವಾಮಿ ಕೊಡ್ಲಿ, ಶ್ರೀದೇವಿ ನಾಯಕ, ಪವನ್ ಕುಮಾರ ಪಾಟೀಲ, ಗಿರಿಯಪ್ಪ ನೆಲಹಾಳ ಮತ್ತಿತರರು ಉಪಸ್ಥಿತರಿದ್ದರು.






