ರಾಯಚೂರು | ಕನ್ನಡ ಧ್ವಜದ ಕಟ್ಟೆ ಧ್ವಂಸ, ಸಾವರ್ಕರ್ ಪ್ರತಿಮೆ ಅಭಿವೃದ್ಧಿ

ರಾಯಚೂರು, ಜ.12: ನಗರದ ಐತಿಹಾಸಿಕ ಮಾವಿನಕೆರೆಯ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿರುವ ನಡುವೆ ಕೆರೆಗೆ ಹೊಂದಿಕೊಂಡ ಜಾಗದಲ್ಲಿದ್ದ ಕನ್ನಡದ ಧ್ವಜ ಕಟ್ಟೆ, ಛತ್ರಪತಿ ಶಿವಾಜಿಯ ನಾಮಫಲಕದ ಕಟ್ಟೆ ಧ್ವಂಸಗೊಳಿಸಲಾಗಿದೆ. ಆದರೆ ಸಾವರ್ಕರ್ ಪ್ರತಿಮೆಗೆ ದೊಡ್ಡದಾದ ಕಟ್ಟೆ ಮಾಡಿ ಅಭಿವೃದ್ಧಿಗೊಳಿಸಲು ಮುಂದಾಗಿರುವ ಸ್ಥಳೀಯ ಆಡಳಿತ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.
ಹಲವು ಹೋರಾಟಗಳ ಫಲವಾಗಿ ಅನೇಕ ವರ್ಷಗಳಿಂದ ಒತ್ತುವರಿಯಾಗುತ್ತಿದ್ದ ಮಾವಿನಕೆರೆ ಜಾಗವನ್ನು ಸಂರಕ್ಷಿಸಿ ಪ್ರವಾಸಿ ತಾಣ ಮಾಡಲು ಆಡಳಿತ ಸರಕಾರ ಮುಂದಾಗಿದೆ. ಆದರೆ ಅಭಿವೃದ್ಧಿಯ ನೆಪದಲ್ಲಿ, ಕರವೇ ನಿರ್ಮಿಸಿದ್ದ ಧ್ವಜಾರೋಹಣದ ಕಟ್ಟೆ, ಶಿವಾಜಿಯ ನಾಮಫಲಕ ತೆರವುಗೊಳಿಸಲಾಗಿತ್ತು. ಆದರೆ ಇದೆಲ್ಲದರ ನಡುವೆ ಸಾವರ್ಕರ್ ಪ್ರತಿಮೆಯನ್ನು ತೆರವುಗೊಳಿಸದೆ ದೊಡ್ಡ ಕಟ್ಟೆ ಮಾಡಿ ಉದ್ಯಾನ ಮಾಡಿ ಅಲಂಕಾರಗೊಳಿಸಲಾಗುತ್ತಿದೆ. ಇದು ಪ್ರಗತಿಪರರ ಆಕ್ರೋಶಕ್ಕೆ ಕಾರಣವಾಗಿದೆ.
‘ಸಾವರ್ಕರ್ ವಿವಾದಿತ ವ್ಯಕ್ತಿ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾವರ್ಕರ ವಿಚಾರದ ವಿರುದ್ಧವಾಗಿದ್ದಾರೆ. ಕೆಲ ಸ್ಥಳೀಯ ಕಾಂಗ್ರೆಸ್ ನಾಯಕರು ಗಾಂಧಿ ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟು ಬ್ರಿಟಿಷರ ಓಲೈಸಿದ ವ್ಯಕ್ತಿಯ ಪ್ರತಿಮೆ ಅಭಿವೃದ್ಧಿ ಗೊಳಿಸುವ ಮೂಲಕ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಕೂಡಲೇ ಪ್ರತಿಮೆ ತೆರವುಗೊಳಿಸಿ ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ್ಮಾ ಗಾಂಧಿ, ಬಸವಣ್ಣ, ಅಥವಾ ಬುದ್ಧನ ಪ್ರತಿಮೆ ನಿರ್ಮಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು’ ಎಂದು ಸಿಪಿಐಎಂಎಲ್ ಲಿಬರೇಶನ್ ಪಕ್ಷದ ಜಿಲ್ಲಾ ಮುಖಂಡ ಅಜೀಜ್ ಜಾಗೀರದಾರ್ ಹೇಳಿದ್ದಾರೆೆ.







