ರಾಯಚೂರು | ಜಾಫರ್ ಮೊಯಿದ್ದೀನ್ಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ

ಜಾಫರ್ ಮೊಯಿದ್ದೀನ್
ರಾಯಚೂರು : ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಜಾಫರ್ ಮೊಯಿದ್ದೀನ್ ಅವರು "ಸಂಕೀರ್ಣ" ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
64 ವರ್ಷದ ಜಾಫರ್ ಮೊಯಿದ್ದೀನ್ ಅವರು ತಮ್ಮ 40 ವರ್ಷಗಳ ಜೀವನದಲ್ಲಿ ನಾಟಕ, ಕವಿ ಮತ್ತು ಹಲವಾರು ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಇವರು ಎರಡು ಬಾರಿ ಯುಪಿಎಸ್ ಸಿ ಯಲ್ಲಿ ಪಾಸ್ ಆಗಿದ್ದರು. ಸರ್ಕಾರಿ ಸೇವೆಗೆ ಗುಡ್ ಬೈ ಹೇಳಿ ತಮ್ಮದೇ ಆದ ಕೌಶಲ್ಯಯುತ ಜೀವನ ನಡೆಸಲು ಮುಂದಾದರು. ಅವರು ರಕ್ಷಣಾ ಇಲಾಖೆಯಲ್ಲಿ ಉಪ ಶಿಲ್ಪಿಯಾಗಿ 5 ವರ್ಷ ಸೇವೆ ಮಾಡಿ ರಾಜೀನಾಮೆ ನೀಡಿ ಪುನಃ ರಂಗಭೂಮಿಯಲ್ಲಿ ಸೇವೆ ಮುಂದುವರೆಸಿದರು.
64 ವರ್ಷದ ಜಾಫರ್ ಮೊಯಿದ್ದೀನ್ ಅವರು ಮೂಲತಃ ರಾಯಚೂರು ನಗರದವರಾಗಿದ್ದು, 1961ರಂದು ಆಗಸ್ಟ್ 15ರಂದು ಜನಿಸಿದ ಇವರು ಬೆಂಗಳೂರಿನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಿಂದ ವಾಸ್ತುಶಿಲ್ಪದಲ್ಲಿ ಪದವಿ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ತಮ್ಮ ಶಿಕ್ಷಣ ಪೂರೈಸಿದ ನಂತರ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯಲ್ಲಿ ಉಪ ವಾಸ್ತುಶಿಲ್ಪಿಯಾಗಿ ಸೇವೆ ಸಲ್ಲಿಸಿ 1997ರಲ್ಲಿ ಸೇವೆಗೆ ರಾಜಿನಾಮೆ ನೀಡಿ ಜಾಫರ್ ಅಸೋಸಿಯೇಟ್ಸ್ ರಚಿಸಿಕೊಂಡು ಬೆಂಗಳೂರು ಮತ್ತು ರಾಯಚೂರಿನಲ್ಲಿ ಕಾರ್ಯ ನಿರ್ವಹಿಸಲು ಮುಂದಾದರು.
ಮಾನವ ಹಕ್ಕುಗಳಿಗಾಗಿ ಹೋರಾಟ, ಅನೇಕ ಚಳುವಳಿಗಳಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಶಂಕರ್ ನಾಗ್ ಅವರ ಕನಸಿನ ಕೂಸು ಮಾಲ್ಗುಡಿ ಡೇಸ್ ನಲ್ಲಿಯೂ ಮಿಠಾಯಿ ವಾಲಾ ಪಾತ್ರ ಮಾಡಿದ್ದಲ್ಲದೇ ಹಿನ್ನೆಲೆ ಧ್ವನಿ ನೀಡಿ ಸೈ ಎನಿಸಿಕೊಂಡಿದ್ದರು.
ಅವರೇ ನಿರ್ದೇಶಿಸಿ ನಟಿಸಿದ "ಝಿಕ್ರ್-ಎ-ಗಾಲಿಬ್" ಚಿತ್ರವನ್ನು ಆ.13ರ, 2016 ರಂದು ದುಬೈನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಪ್ರದರ್ಶಿಸಿದ್ದಾರೆ. ವಾಸ್ತುಶಿಲ್ಪವನ್ನು ಅಧ್ಯಯನ ಮಾಡುವಾಗ ರಂಗಭೂಮಿ, ರೇಡಿಯೊ ಮತ್ತು ಚಲನಚಿತ್ರಗಳಲ್ಲಿ ಆಸಕ್ತಿ ಬೆಳೆಸಿಕೊಂಡು 35 ವರ್ಷಗಳಿಂದ ಆಧುನಿಕ ರಂಗಭೂಮಿ, ಸಿನಿಮಾ ಚಳುವಳಿ ಮತ್ತು ರೇಡಿಯೊ, ಆಡಿಯೊ-ವಿಶುವಲ್ ಪ್ರಸಾರ ಮತ್ತು ಮಲ್ಟಿಮೀಡಿಯಾ ಪ್ರಚಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಉರ್ದು ಮತ್ತು ಹಿಂದಿಯಲ್ಲಿ ಹಲವಾರು ನಾಟಕಗಳನ್ನು ಇವರು ಬರೆದಿದ್ದಾರೆ. ಕಾರ್ಪೊರೇಟ್ ಉದ್ಯಮಗಳು, ಟೆಲಿ-ನಾಟಕಗಳು ಮತ್ತು ಜಾಹೀರಾತು-ಚಿತ್ರಗಳನ್ನು ಬರೆಯುವುದರ ಜೊತೆಗೆ ಚಲನಚಿತ್ರಗಳು, ಕಿರುಚಿತ್ರಗಳು, ಸಾಕ್ಷ್ಯಚಿತ್ರಗಳು ಮತ್ತು ಅನಿಮೇಷನ್ ಚಲನಚಿತ್ರಗಳನ್ನು ಡಬ್ಬಿಂಗ್ ಮಾಡಿದ್ದಾರೆ.
ಅವರು 1988 ರಲ್ಲಿ 'ಕಠ್ಪುತ್ಲಿಯಾನ್ ರಂಗಭೂಮಿ ಗ್ರೂಪ್' ಹೆಸರಲ್ಲಿ ರಂಗಭೂಮಿ ಗುಂಪು ರಚಿಸಿದರು. ಪ್ರಸ್ತುತ ಇಂಡೋ-ಫ್ರೆಂಚ್ ಸಾಂಸ್ಕೃತಿಕ ಕೇಂದ್ರವಾದ ಅಲೈಯನ್ಸ್ ಫ್ರಾಂಚೈಸ್ ಡಿ ಬೆಂಗಳೂರಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೆಟಿಜಿ ಬ್ಯಾನರ್ ಮತ್ತು ಇತರ ರಂಗಭೂಮಿ ವೇದಿಕೆಗಳಲ್ಲಿ ಅನೇಕ ಉರ್ದು ನಾಟಕಗಳಲ್ಲಿ ನಟಿಸಿದ್ದಾರೆ. ನಟಿ ಶ್ರೀಮತಿ ಅರುಂಧತಿ ನಾಗ್ ಅವರೊಂದಿಗೆ 'ಬಿಖ್ರೆ ಬಿಂಬ್' ನಲ್ಲಿ ಅಭಿನಯಿಸಿದ್ದಾರೆ. ಅನೇಕ ಸಂಭಾಷಣೆಗಳನ್ನೂ ಬರೆದಿದ್ದಾರೆ.
"ದಿ ಡ್ರೀಮ್ಸ್ ಆಫ್ ಟಿಪ್ಪು ಸುಲ್ತಾನ್" ಎಂಬ ಕನ್ನಡ ಮತ್ತು ಇಂಗ್ಲಿಷ್ ನಾಟಕವನ್ನು ಉರ್ದು ಭಾಷೆಯಲ್ಲಿ "ಟಿಪ್ಪು ಸುಲ್ತಾನ್ ಕೆ ಖ್ವಾಬ್" ಎಂದು ಅನುವಾದಿಸಿದ್ದಾರೆ. ಇದನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಬರೆದಿದ್ದಾರೆ. ಅನುವಾದಿತ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನ.10ರ, 2016 ರಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಬಿಡುಗಡೆ ಮಾಡಿದ್ದರು.
ಹಮ್ ಕೋ ಜಹಾ ಜಹಾ ನಯಿ ಸೋಚ್ ಲೇಗಯಿ, ಸರ್ಕಾರ್ ಮಿಲಿ ವಹಾ ವಜಾ ದೀವಾರ್ ಕಿ ತರಹ : ಸಮಾಜದಲ್ಲಿ ಮಾನವ ಹಕ್ಕುಗಳ ದೌರ್ಜನ್ಯ ಮತ್ತು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯ ವಿರುದ್ಧ ನಡೆದ ಹೋರಾಟದ ನೇತೃತ್ವ ವಹಿಸಿದ್ದರು. ಬೆಂಗಳೂರಿನಲ್ಲಿ ನಡೆದ ಸಿಎಎ ಎನ್ ಆರ್ ಸಿ ಹೋರಾಟದಲ್ಲಿ ಗಿರೀಶ್ ಕಾರ್ನಾಡ್ ಅವರ ಜೊತೆ ಪಾಲ್ಗೊಂಡಿದ್ದ ಅವರು ಹಮ್ ಕೋ ಜಹಾ ಜಹಾ ನಯಿ ಸೋಚ್ ಲೇಗಯಿ, ಸರ್ಕಾರ್ ಮಿಲಿ ವಹಾ ವಜಾ ದೀವಾರ್ ಕಿ ತರಹ ಎಂದು ಶಾಯಿರಿ ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಹೀಗೆ ಅವರು ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ್ದಾರೆ ಹಾಗೂ ಸಾಮಾಜಿಕ ಕಳಾಕಳಿ ವ್ಯಕ್ತಪಡಿಸಿದ್ದಾರೆ.
ಸುದೀರ್ಘವಾದ 40 ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿ ಸಾಧನೆಗೈದ ಅವರು, ರಾಜಕೀಯ ಕ್ಷೇತ್ರಕ್ಕೂ ಆಕರ್ಷಿತರಾಗಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಗಾಗಿ ಪ್ರಯತ್ನ ನಡೆಸಿದ್ದರು, ಆದರೆ, ಮಾಜಿ ಶಾಸಕ ಹಾಗೂ ಪರಾಜಿತ ಅಭ್ಯರ್ಥಿ ಸೈಯದ್ ಯಾಸೀನ್ ಅವರಿಗೆ ಟಿಕೆಟ್ ನೀಡುವುದು ನಿಶ್ಚಿತವಾಗಿದ್ದರಿಂದ ತಮ್ಮ ನಿರ್ಧಾರದಿಂದ ಹಿಂದೆ ಸರಿದರು ಎಂದು ಹೇಳಲಾಗುತ್ತದೆ.
ನಾನು ಎಂಜಿನಿಯರಿಂಗ್ ಕಾಲೇಜಿನಿಂದ ವಾಸ್ತುಶಿಲ್ಪದಲ್ಲಿ ಪದವಿ ಪಡೆದು ವಾಸ್ತುಶಿಲ್ಪಯಾಗಿ ಗುರುತಿಸಿಕೊಂಡಿದ್ದರೂ, ಆನಂತರ ನನಗೆ ರಂಗಭೂಮಿ, ಸಾಹಿತ್ಯ ಆಕರ್ಷಕವಾಯಿತು. ಯುಪಿಎಸ್ಸಿ ಎರಡು ಬಾರಿ ಪಾಸ್ ಆಗಿದ್ದೇನೆ. ರಕ್ಷಣಾ ಸಚಿವಾಲಯದಲ್ಲಿ 5 ವರ್ಷ ಕೆಲಸ ಮಾಡಿದರೂ, ನನಗೆ ಮುಂದುವರೆಯಲು ಆಸಕ್ತಿ ಇರದೇ ರಂಗಭೂಮಿ, ಸಿನಿಮಾ, ಸಾಹಿತ್ಯವನ್ನು ಬಿಡಲು ಆಗಲಿಲ್ಲ. ಸಾಮಾಜಿಕ ಹೋರಾಟಗಳಲ್ಲಿಯೂ ಭಾಗವಹಿಸಿದ್ದು, 40 ವರ್ಷಗಳ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಖುಷಿ ನೀಡಿದೆ.
-ಜಾಫರ್ ಮೊಯಿದ್ದೀನ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ರಾಯಚೂರು.







