ರಾಯಚೂರು | ಹತ್ತಿ ಮಾರಾಟಕ್ಕೆ ‘ಕಪಾಸ್ ಕಿಸಾನ್’ ಆಪ್ ನೋಂದಣಿ ಅವಧಿ ಅ.31ರವರೆಗೆ ವಿಸ್ತರಣೆ

PC | GROK
ರಾಯಚೂರು : ಹತ್ತಿ ಬೆಳೆಯುವ ರೈತರ ಹಿತದೃಷ್ಠಿಯಿಂದ ಭಾರತೀಯ ಹತ್ತಿ ನಿಗಮ ನಿಯಮಿತ (The Cotton Corporation of India) 2025–26ನೇ ಬೆಳೆ ವರ್ಷಕ್ಕೆ ಕನಿಷ್ಠ ಬೆಂಬಲ ಬೆಲೆ (MSP) ಅಡಿಯಲ್ಲಿ ಹತ್ತಿ ಮಾರಾಟ ಮಾಡಲು ರೈತರು “ಕಪಾಸ್ ಕಿಸಾನ್” ಮೊಬೈಲ್ ಆಪ್ ಮೂಲಕ ನೋಂದಾಯಿಸಿಕೊಳ್ಳುವ ಅವಧಿಯನ್ನು ಅ.31ರವರೆಗೆ ವಿಸ್ತರಿಸಿದೆ.
ನೋಂದಣಿಗೆ ಪಹಣಿ ದಾಖಲೆ, ಆಧಾರ್ ಕಾರ್ಡ್, ಮತ್ತು ಕೃಷಿ ಇಲಾಖೆಯ ಎಫ್ಐಡಿ ಸಂಖ್ಯೆ ಅಗತ್ಯ. ರೈತರು “ಕಪಾಸ್ ಕಿಸಾನ್” ಆಪ್ ಡೌನ್ಲೋಡ್ ಮಾಡಿ, ಈ ದಾಖಲೆಗಳ ಸಹಾಯದಿಂದ ಸರಳ ರೀತಿಯಲ್ಲಿ ನೋಂದಾಯಿಸಿಕೊಳ್ಳಬಹುದು.
ನೋಂದಾಯಿತ ರೈತರಿಂದ ಹತ್ತಿ ಖರೀದಿ ಕಾರ್ಯವನ್ನು ಭಾರತೀಯ ಹತ್ತಿ ನಿಗಮದ ಅಧಿಕೃತ ಪಾಲುದಾರರಾದ ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಜಿನ್ನಿಂಗ್ ಮತ್ತು ಪ್ರಸ್ಸಿಂಗ್ ಘಟಕದಲ್ಲಿ ಅಥವಾ ನಿಗಮ ಸೂಚಿಸಿರುವ ಖಾಸಗಿ ಹತ್ತಿ ಕಾರ್ಖಾನೆಗಳಲ್ಲಿ ನಡೆಸಲಾಗುತ್ತದೆ.
ಕನಿಷ್ಠ ಬೆಂಬಲ ಬೆಲೆ (MSP) ಪ್ರಕಾರ ಮಧ್ಯಮ ಪ್ರಧಾನ ಹತ್ತಿಗೆ ಕ್ವಿಂಟಲ್ಗೆ 7,710 ರೂ. ಹಾಗೂ ಉದ್ದ ಪ್ರಧಾನ ಹತ್ತಿಗೆ ಕ್ವಿಂಟಲ್ಗೆ 8,110 ನಿಗದಿಯಾಗಿದೆ. ರೈತರ ಹತ್ತಿಯ ಗುಣಮಟ್ಟ ಪರಿಶೀಲಿಸಿದ ನಂತರ ನಿಗಮದ ಅಧಿಕಾರಿಗಳು ಅಂತಿಮ ಬೆಲೆ ನಿರ್ಧರಿಸಲಿದ್ದಾರೆ.
ರೈತರು ತಮ್ಮ ಉತ್ಪನ್ನಕ್ಕೆ ಉತ್ತಮ ಲಾಭ ಪಡೆಯಲು ಈ ಯೋಜನೆಯಡಿ ಹತ್ತಿ ಮಾರಾಟ ಮಾಡಲು ಮುಂದಾಗಬೇಕು ಎಂದು ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಪತಂಗೆ ಜಯವಂತ್ ರಾವ್, ಉಪಾಧ್ಯಕ್ಷ ಶಶೀಧರ ಪಾಟೀಲ್, ವ್ಯವಸ್ಥಾಪಕ ನಿರ್ದೇಶಕ ಶೇಕ್ ಹುಸೇನ್ ಹಾಗೂ ಪ್ರಧಾನ ವ್ಯವಸ್ಥಾಪಕ ಬಂದಯ್ಯ ಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







