ರಾಯಚೂರು| ಅಕ್ರಮ ಮದ್ಯ ಮಾರಾಟದ ವಿರುದ್ಧ ಕೆಆರ್‌ಎಸ್ ಪಕ್ಷದಿಂದ ಜನ ಜಾಗೃತಿ ಜಾಥಾ

ಲಿಂಗಸುಗೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಗ್ಗಿಲ್ಲದೆ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ವಿರುದ್ಧ ಜನರಿಗೆ ಜಾಗೃತಿ ಮೂಡಿಸಿ ಮದ್ಯ ಮುಕ್ತ ಕಲ್ಯಾಣ ಕರ್ನಾಟಕದ ನಿರ್ಮಾಣಕ್ಕೆ ಕೆಆರ್ ಎಸ್ ಪಕ್ಷದ ವತಿಯಿಂದ ಲಿಂಗಸೂರು ತಾಲೂಕಿನ ಗುರುಗುಂಟ ಗ್ರಾಮದಲ್ಲಿ ಅರಿವಿನ ಕ್ರಾಂತಿ (ಕುಡಿತ ಬಿಡಿಸಿ ಸಂಸಾರ ಉಳಿಸಿ) ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ಗುರುಗುಂಟದ ಬಸ್ ನಿಲ್ದಾಣದಿಂದ ಪಕ್ಷದ ನೂರಾರು ಸೈನಿಕರ ನೇತೃತ್ವದಲ್ಲಿ ಆರಂಭವಾದ ಜಾಥಾವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸರಾಯಿ ಬೇಡ, ಶಿಕ್ಷಣ ಬೇಕು. ನಮಗೆ ಬೀರು ಬೇಡ, ನೀರು ಬೇಕು ಎಂದು ಘೋಷಣೆ ಕೂಗುತ್ತಾ, ಅಕ್ರಮವಾಗಿ ಮದ್ಯ ಮಾರುವ ಅಂಗಡಿಗಳಿಗೆ ಭೇಟಿ ಮಾಡಿ ಅಕ್ರಮ ಮದ್ಯ ಮಾರುವುದನ್ನು ನಿಲ್ಲಿಸುವಂತೆ ಅಂಗಡಿ ಮಾಲೀಕರಿಗೆ ಮನವಿ ಮಾಡಲಾಯಿತು.
ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ, ರಾಜ್ಯದಲ್ಲಿ ನಮ್ಮನ್ನು ಆಳುವ ಯಾವುದೇ ಸರ್ಕಾರಗಳು ಜಾರಿ ಮಾಡುತ್ತಿರುವ ಯಾವುದೇ ಜನ ಕಲ್ಯಾಣದ ಯೋಜನೆಗಳು ವಿಶೇಷವಾಗಿ ಬಡತನ ನಿರ್ವಣೆಯಂತಹ ವಿಶೇಷ ಯೋಜನೆಗಳು ಗಣನೀಯವಾಗಿ ಫಲ ನೀಡದೇ ಇರುವ ಕಾರಣ ಕಲ್ಯಾಣ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದ್ದು ಇದರಿಂದಾಗಿ ಮಹಿಳೆಯರು, ಯುವಕರು, ಬಡವರು, ಹಿಂದುಳಿದವರು, ಸಾಮಾನ್ಯ ಜನರು ಬಲಿಯಾಗುತ್ತಿದ್ದಾರೆ. ಹಾಗಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಕಲ್ಯಾಣ ಕರ್ನಾಟಕದ ಭಾಗದ ಹಲವು ಜಿಲ್ಲೆಗಳಲ್ಲಿ ಈ ಜಾಥಾವು ಆಯೋಜಿಸಲಾಗಿದೆ ಎಂದು ಹೇಳಿದರು.
ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಶ್ರೀಮತಿ ಆಶಾ ವೀರೇಶ್ ಮಾತನಾಡಿ, ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯದಿಂದಾಗಿ ಹಾಗೂ ಜನಪ್ರತಿನಿಧಿಗಳ ಸರಕಾರದ ಕಾನೂನು ನಿಯಮಗಳ ಉಲ್ಲಂಘನೆಯಿಂದಾಗಿ ಹಳ್ಳಿ ಹಳ್ಳಿಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ ಅಕ್ರಮವಾಗಿ ಸರಾಯಿ ಸಿಗುವಂತಾಗಿದ್ದು ಇದರಿಂದ ಸಾರ್ವಜನಿಕರು ಮದ್ಯ ವ್ಯಸನಿಗಳಾಗುತ್ತಿದ್ದಾರೆ. ಇದರಿಂದ ಸಾಮಾಜಿಕ, ಆರ್ಥಿಕ, ಕೌಟಂಬಿಕ ಸಮಸ್ಯೆಗಳಿಂದ ಖಿನ್ನತೆಗೆ ಒಳಗಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುವ ಪ್ರಸಂಗಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮದ್ಯಪಾನ ನಿಷೇಧ ಆಂದೋಲನದ ಮುಖ್ಯಸ್ಥೆ ಶ್ರೀಮತಿ ಮೋಕ್ಷಮ್ಮ, ರಾಜ್ಯ ಕಾರ್ಯದರ್ಶಿಗಳಾದ ರಮೇಶ್ ಗೌಡ, ಮಹಿಳಾ ಘಟಕದ ಉಪಾಧ್ಯಕ್ಷೆ ಶಕುಂತಲಾ, ಎಸ್ಸಿಎಸ್ಟಿ ಘಟಕದ ರಾಜ್ಯ ಉಪಾಧ್ಯಕ್ಷೆ ಮಹಾದೇವಿ, ಎಸ್ಸಿಎಸ್ಟಿ ಘಟಕದ ರಾಜ್ಯ ಕಾರ್ಯದರ್ಶಿ ಬಸವ ಪ್ರಭು, ರಾಜ್ಯ ರೈತ ಘಟಕದ ಕಾರ್ಯದರ್ಶಿಗಳಾದ ಶಿವರಾಜ ಕಪಗಲ್, ನಿರುಪಾದಿ ಕೆ ಗೋಮರ್ಸಿ, ಯುವ ಘಟಕದ ಕಾರ್ಯದರ್ಶಿ ದ್ಯಾವಣ್ಣ ಪುಲದಿನ್ನಿ, ರಾಯಚೂರು ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಕಂಡೂರು, ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ಕಾರ್ಯದರ್ಶಿಗಳಾದ ವಿಶ್ವನಾಥ್ ನಾಯ್ಡು, ಅಲ್ಲಾಸಾಬ್, ಶಂಕರ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.







