ರಾಯಚೂರು | ನಿವೇಶನ ಜಾಗ ಒತ್ತುವರಿ ದೂರು : ಪ್ರಕರಣ ದಾಖಲು

ರಾಯಚೂರು, ಆ.30: ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ರಾಜ್ಯ ಸರಕಾರದ ಆಶ್ರಯ ಯೋಜನೆಯಡಿಯ 1991ರಲ್ಲಿ ನಿವೇಶನಕ್ಕೆ ಹಂಚಿದ ಜಾಗ ಒತ್ತುವರಿ ಕುರಿತ ದೂರಿನ ವಿಚಾರಣೆ ನಡೆಸುವಂತೆ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಕೃಷಿ ವಿವಿಯ ಆವರಣದ ಜಗಜ್ಯೋತಿ ಬಸವೇಶ್ವರ ಸಭಾಂಗಣದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಉಪ ಲೋಕಾಯುಕ್ತರು 66 ಫಲಾನುಭವಿಗಳ ಅಹವಾಲನ್ನು ಸ್ವೀಕರಿಸಿ ಮಾತನಾಡಿದರು.
ಈ ವೇಳೆ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ 20ಕ್ಕೂ ಹೆಚ್ಚು ಮಹಿಳೆಯರು ನಮಗೆ ರಾಜ್ಯ ಸರಕಾರದ ಆಶ್ರಯ ಯೋಜನೆಯಡಿಯ ಗ್ರಾಮದ ಸರ್ವೇ ನಂ.1007 ರಲ್ಲಿ ರಚಿಸಿರುವ 30*40 ವಿಸ್ತೀರ್ಣಯುಳ್ಳ ನಿವೇಶನಗಳನ್ನು 1991 ನವೆಂಬರ್‌ನಲ್ಲಿ ಹಂಚಿಕೆ ಮಾಡಿದ್ದಾರೆ. ಆದರೆ, ಆ ಜಾಗವನ್ನು ಬೇರೆಯವರು ಒತ್ತುವರಿ ಮಾಡಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಇದಕ್ಕೆ ಸ್ಪಂದಿಸಿದ ಉಪ ಲೋಕಾಯುಕ್ತರು, ಸ್ಥಳಕ್ಕೆ ದೇವದುರ್ಗ ತಹಶೀಲ್ದಾರ್ ಹಾಗೂ ಗಬ್ಬೂರ ಪಿಡಿಒ ಅವರನ್ನು ಕರೆದು ವಿಚಾರಿಸಿದರು. ಈ ಬಗ್ಗೆ ವಿಚಾರಣೆ ನಡೆಸಲು ಸಂಬಂಧಿಸಿದ ಅಧಿಕಾರಿಗಳ ಮೇಲೆ ಸ್ಥಳದಲ್ಲೇ ಸುವೋಮೋಟೊ ಕೇಸ್ ದಾಖಲಿಸುವಂತೆ ಸೂಚನೆ ನೀಡಿದರು.





