ರಾಯಚೂರು | ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನಕ್ಕೆ ಚಾಲನೆ

ರಾಯಚೂರು ನ.03 : ರಾಯಚೂರು ಜಿಲ್ಲೆಯಾದ್ಯಂತ ನಡೆಯಲಿರುವ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನಕ್ಕೆ ಮಹಾನಗರ ಪಾಲಿಕೆಯ ಸದಸ್ಯರಾದ ಉಮಾ ರವೀಂದ್ರ ಜಾಲ್ದಾರ ಚಾಲನೆ ನೀಡಿದರು.
ನವೆಂಬರ್ 3 ರಿಂದ 19ರವರೆಗೆ ಅಭಿಯಾನ ನಡೆಯಲಿದೆ.
ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಹಿರಾಬಾದ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ಮಾತನಾಡಿ, ಸಾವಿರಾರು ವರ್ಷಗಳಿಂದ ಇಂದಿಗೂ ಸಮುದಾಯದಲ್ಲಿ ಉಳಿದಿರುವ ಹಾಗೂ ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಬಹುದಾದ ನರ ಮತ್ತು ಚರ್ಮ ರೋಗದ ಖಾಯಿಲೆ ಕುಷ್ಠರೋಗವಾಗಿದ್ದು ಕನಿಷ್ಟ 6 ತಿಂಗಳಿನಿಂದ ಒಂದು ವರ್ಷದವರೆಗೆ ತಪ್ಪದೆ ಚಿಕಿತ್ಸೆ ಪಡೆಯುವ ಮೂಲಕ ರೋಗ ನಿರ್ಮೂಲನೆಗೆ ಕೈಜೊಡಿಸಲು ಜನತೆ ಮುಂದೆ ಬರಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕ್ಷಯರೋಗ ಪತ್ತೆ ಆಂದೋಲನ: ಇದೇ ಅವಧಿಯಲ್ಲಿ, ಸಕ್ರೀಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಜರಗುತ್ತಿದ್ದು, ಎರಡು ವಾರಕ್ಕಿಂತ ಹೆಚ್ಚು ದಿನ ಕೆಮ್ಮು ಇದ್ದಲ್ಲಿ ಕಫ ಪರೀಕ್ಷೆ ಮಾಡಿಸಲು, ಟಿಬಿ ಇದೆ ಎಂದು ಖಚಿತಪಟ್ಟಲ್ಲಿ 6 ತಿಂಗಳ ಅವಧಿಯವರೆಗೆ ಚಿಕಿತ್ಸಾ ರೂಪದಲ್ಲಿ ಮಾತ್ರೆಗಳನ್ನು ಸೇವಿಸಿ ಗುಣಮುಖರಾಗಲು ಹಾಗೂ ಮಾತ್ರೆಗಳನ್ನು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುವುದು. ಮುಖ್ಯವಾಗಿ ಚಿಕಿತ್ಸೆಯ ಬಗ್ಗೆ ನಿರ್ಲಕ್ಷಿಸದೆ, ಎಮ್‌ಡಿಆರ್ ಟಿಬಿಯಾಗಿ ಬದಲಾಗುವುದನ್ನು ತಪ್ಪಿಸಲು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಲು ಡಿಎಚ್ಓ ವಿನಂತಿಸಿದರು.
ಈ ವೇಳೆ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ನಂದಿತಾ ಎಮ್ ಎನ್, ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ವೇಳೆ ಮುಖಂಡರಾದ ರವೀಂದ್ರ ಜಾಲ್ದಾರ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಮಹಮ್ಮದ್ ಶಾಕೀರ್ ಮೋಹಿಯುದ್ದೀನ್, ಪ್ರಭಾರಿ ತಾಲೂಕು ಆರೋಗ್ಯಾಧಿಕಾರಿ ಡಾ.ಫರಹಾ ನಸ್ರಿನ್ ಖಾಜಿ, ವೈದ್ಯಾಧಿಕಾರಿ ಡಾ.ಶ್ವೇತಾಂಬರಿ, ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅನೀತಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ದಂತ ತಜ್ಞೆ ಡಾ ಪೌಝಿಯಾ, ಡಮೆನ್ ಸಂಸ್ಥೆಯ ಸುಧಾಕರ, ಬಿಹೆಚ್‌ಇಓ ಸರೋಜಾ. ಕೆ, ಹಿರಿಯ ಹೆಚ್‌ಐಓ ಸುರೇಶ್, ಬಿಬಿ ದೊಡ್ಡಮನಿ, ಹಿರಿಯ ಪ್ರಯೋಗಾಲಯ ತಂತ್ರಜ್ಞೆ ಸಾಯಿರಾಬಾನು, ಹೆಚ್‌ಐಓ ಮಹೇಂದ್ರ, ರಾಜು, ಶ್ರೀಕಾಂತ್, ಎಸ್‌ಟಿಎಸ್ ಅಮೀರ್ ಸೇರಿದಂತೆ ನಗರ ಪ್ರಾಥಮಿಕ ಆರೊಗ್ಯ ಕೇಂದ್ರದ ಶೂಶ್ರೂಷಣಾಧಿಕಾರಿಗಳು, ಆರೋಗ್ಯ ನೀರಿಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಜಿಲ್ಲಾ ಕುಷ್ಠರೋಗ, ಕ್ಷಯರೋಗ ವಿಭಾಗದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ತಾಯಂದಿರು ಉಪಸ್ಥಿತರಿದ್ದರು.







