ರಾಯಚೂರು | ಆ.6ರಂದು ನಡೆಯುವ ಮುಖ್ಯಮಂತ್ರಿಗಳ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲಿ: ಶಾಸಕ ಜೆ.ಟಿ.ಪಾಟೀಲ್

ರಾಯಚೂರು : ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕರ ಹೊಸ ವಸತಿ ಸಮುಚ್ಚಯ ನಿರ್ಮಾಣದ ಶಂಕುಸ್ಥಾಪನೆಗೆ ಆ.6ರಂದು ರಾಯಚೂರು ಆಗಮಿಸಲಿರುವ ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ಅಧ್ಯಕ್ಷರು ಆಗಿರುವ ಶಾಸಕರಾದ ಜೆ.ಟಿ.ಪಾಟೀಲ್ ಅವರು ಹೇಳಿದರು.
ಲಿಂಗಸೂರು ತಾಲೂಕಿನ ಹಟ್ಟಿಯಲ್ಲಿನ ಚಿನ್ನದ ಗಣಿ ಕಂಪನಿಯ ಸಭಾಂಗಣದಲ್ಲಿ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕರ ಹೊಸ ವಸತಿ ಸಮುಚ್ಚಯ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿ, ಅವರು ಮಾತನಾಡಿದರು.
ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲ ಜನ ಪ್ರತಿನಿಧಿಗಳು, ಗಣ್ಯರು ಮತ್ತು ಸಾರ್ವಜನಿಕರಿಗೆ ಆಸನ, ಊಟ, ಉಪಹಾರ, ಸಾರಿಗೆ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಆಗಬೇಕು. ಕಾರ್ಯಕ್ರಮಕ್ಕೆ ಆಗಮಿಸಲಿರುವ ಅಂದಾಜು 15,000 ಜನರಿಗೆ ತೊಂದರೆಯಾಗದ ರೀತಿಯಲ್ಲಿ ಊಟದ ಸಿದ್ಧತೆ ಮತ್ತು ಕಾರ್ಯಕ್ರಮಕ್ಕೆ ಬಂದು ಹೋಗಲು ಸಾರಿಗೆ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮದ ಬಗ್ಗೆ ಸರಿಯಾದ ರೀತಿಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯಿಂದ ಮೇಲುಸ್ತುವಾರಿಯಾಗಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಲು ಬರುವ ಅರ್ಜಿದಾರರು, ಸಾರ್ವಜನಿಕರು ಮತ್ತು ರೈತ ಕಾರ್ಮಿಕ ಮತ್ತು ಇನ್ನೀತರ ಮುಖಂಡರಿಗೆ ಅನುಕೂಲವಾಗುವಂತೆ ಅರ್ಜಿ ಸಲ್ಲಿಕೆ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಬೇಕು ಎಂದು ಅವರು ತಿಳಿಸಿದರು.
ಶಾಸಕರಾದ ಮಾನಪ್ಪ ಡಿ.ವಜ್ಜಲ್, ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಮಾತನಾಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಶರಣಗೌಡ ಬಯ್ಯಾಪುರ, ಮುಖಂಡರಾದ ಡಿ ಎಸ್ ಹೂಲಗೇರಿ, ಕಂಪನಿಯ ಎಂ.ಡಿ.ಆರ್ ಶಿಲ್ಪಾ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.







