ರಾಯಚೂರು | ಉತ್ಪಾದನಾ ವೆಚ್ಚದ ಅಧ್ಯಯನ ನಡೆಯಲಿ : ಡಾ.ಅಶೋಕ್ ದಳವಾಯಿ
ʼರೈತರ ಹಿತ ಚಿಂತನೆ ಸಂವಾದʼ
ರಾಯಚೂರು : ಕೃಷಿ ಉತ್ಪಾದನೆಗಳ ಉತ್ಪಾದನಾ ವೆಚ್ಚವನ್ನು ಕೃಷಿ ವಿವಿಗಳ ಮೂಲಕ ಅಧ್ಯಯನ ಮಾಡಿ, ಸರಾಸರಿ ಉತ್ಪಾದನಾ ವೆಚ್ಚದ ಆಧಾರದ ಮೇಲೆ ರೈತರಿಗೆ ಸಿಗಬೇಕಾದ ಎಂಎಸ್ಪಿಯನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಧ್ಯೇಯವಾಗಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಅಶೋಕ್ ಎಂ.ದಳವಾಯಿ ತಿಳಿಸಿದರು.
ನಗರದ ಕೃಷಿ ತಂತ್ರಜ್ಞಾನ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತರ ಹಿತ ಚಿಂತನೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ ವೆಚ್ಚಕ್ಕೂ ಉತ್ಪಾದನಾ ವೆಚ್ಚಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕೃಷಿ ವೆಚ್ಚವೆಂದರೇ ಒಂದು ಎಕರೆಗೆ ಎಷ್ಟು ಖರ್ಚಾಗುತ್ತದೆ ಎಂಬುವುದನ್ನು ತಿಳಿಸುತ್ತದೆ. ಈ ವೆಚ್ಚವು ಹಲವು ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಆಯಾ ಪ್ರದೇಶದಲ್ಲಿರುವ ಕೂಲಿ, ಯಂತ್ರೋಪಕರಣಗಳ ವೆಚ್ಚಕ್ಕೆ ತಕ್ಕಂತೆ ವ್ಯತ್ಯಾಸಗಳನ್ನು ಹೊಂದಿರುತ್ತದೆ. ಆದರೆ ಎಂಎಸ್ಪಿ ಎಂಬುವುದು ಉತ್ಪಾದನಾ ವೆಚ್ಚದ ಮೇಲೆ ನಿರ್ಧಾರವಾಗಿದ್ದು, ಒಂದು ಕ್ವಿಂಟಲ್‌ಗೆ ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ತಿಳಿಸುತ್ತದೆ.
ಉತ್ಪಾದನಾ ವೆಚ್ಚದ ದೇಶದ ಸರಾಸರಿ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳುವುದರಿಂದ ಅನೇಕ ರಾಜ್ಯಗಳಲ್ಲಿರುವ ತಂತ್ರಜ್ಞಾನ, ವಾತಾವರಣ, ಇಳುವರಿ ಸೇರಿದಂತೆ ಇತರೆ ಕಾರಣಗಳಿಂದ ಪ್ರತಿಫಲಿಸುವುದಿಲ್ಲ. ಉತ್ಪಾದನಾ ವೆಚ್ಚ ಹೆಚ್ಚಿರುವ ರಾಜ್ಯಗಳಲ್ಲಿ ಎಂಎಸ್ಪಿ ರೈತರಿಗೆ ಲಾಭವಾಗುವುದಿಲ್ಲ ಎಂದರು.
ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ ಮಾತನಾಡಿ, ರಾಜ್ಯದಲ್ಲಿ ಕೃಷಿ ವಲಯಕ್ಕೆ ಇಳುವರಿ ಹಾಗೂ ಬೆಲೆ ಗಂಡಾಂತರದಿಂದ ಹೊರಬಂದರೆ ಮಾತ್ರ ಕೃಷಿ ವಲಯ ಸಮೃದ್ಧವಾಗಿರುತ್ತದೆ. ಕೃಷಿ ವಲಯ ಹಾಗೂ ರೈತರಹಿತಕ್ಕಾಗಿ ಹಮ್ಮಿಕೊಂಡಿರುವ ಇಂದಿನ ಕಾರ್ಯಕ್ರಮದಲ್ಲಿ, ಜ್ಞಾನ, ಅನುಭವ, ಸಾಧನೆ ಹಾಗೂ ಸವಾಲುಗಳಿವೆ. ಕೃಷಿ ಬೆಲೆ ಆಯೋಗ ಎಂದರೆ ಕೇವಲ ಬೆಲೆ ಸಂಬಂಧಿಸಿದ ಆಯೋಗವಲ್ಲ. ಇದರಲ್ಲಿ ಕೃಷಿಯ ವಲಯಗಳಿಗೆ ಸಂಬಂಧಿಸಿದಂತೆ ಯಾವ ವಲಯಗಳಲ್ಲಿ ಯಾವ ಯಾವ ಬೆಲೆ ಬೆಳೆಯಬೇಕೆಂಬುವುದನ್ನು ಕೂಡ ಒಳಗೊಂಡಿದೆ ಎಂದರು.
ಐಎಸ್ಇಇ ದಕ್ಷಿಣ ವಲಯದ ಅಧ್ಯಕ್ಷ ಡಾ.ಜಿ.ಈಶ್ವರಪ್ಪ, ಕೃಷಿ ವಿವಿ ಬೆಂಗಳೂರಿನ ಮಾಜಿ ವಿಸ್ತರಣಾ ನಿರ್ದೇಶಕ ಡಾ.ವೀರಭದ್ರಯ್ಯ, ಕೃಷಿ ತಂತ್ರಜ್ಞರ ಸಂಸ್ಥೆ ಬೆಂಗಳೂರಿನ ಕಾರ್ಯದರ್ಶಿ ವೀರಣ್ಣ ಕಮತರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಯಪ್ರಕಾಶ, ಕೃಷಿಕ ಸಮಾಜದ ಅಧ್ಯಕ್ಷ ಸಿದ್ಧಾರೆಡ್ಡಿ, ಕೃಷಿ ತಂತ್ರಜ್ಞರ ಸಂಸ್ಥೆಯ ಜಿಲ್ಲಾಧ್ಯಕ್ಷ ಆರ್.ಎ.ಪಾಟೀಲ್ ಸೇರಿದಂತೆ ಇತರರಿದ್ದರು.
ಈ ವೇಳೆ ಮೆಣಸಿನಕಾಯಿ ಬೆಳೆಗೆ ಬೆಂಬಲ ಬೆಲೆ, ತೊಗರಿ ಬೆಳೆಯನ್ನು ಗೋಡನ್ಗಳಲ್ಲಿ ಸಂಗ್ರಹಿಸಲು ಕ್ರಮ, ಬೀತ್ತನೆ ಬೀಜಗಳ ಉತ್ಪಾದನೆ ಹೆಚ್ಚಳಕ್ಕೆ ಕ್ರಮ, ನರ್ಸರಿ ಹಾಗೂ ರೈತರಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ, ಭತ್ತಕ್ಕೆ ಉತ್ತಮ ಬೆಂಬಲ ಬೆಲೆ ನಿರ್ಧಾರ ಹಾಗೂ ಉತ್ತಮ ಮಾರುಕಟ್ಟೆಯ ವ್ಯವಸ್ಥೆ, ಕೆಳ ಭಾಗದ ರೈತರ ಹೊಲಗಳಿಗೆ ಸಮರ್ಪಕ ನೀರು ಒದಗಿಸಲು ಕ್ರಮದ ಕುರಿತು ವಿವಿಧ ರೈತರು ಆಯೋಗದ ಅಧ್ಯಕ್ಷರ ಜತೆ ಚರ್ಚಿಸಿದರು.