ರಾಯಚೂರು: ಲೋಕಾಯುಕ್ತ ಅಧಿಕಾರಿಗಳಿಂದ ಮಹಾನಗರ ಪಾಲಿಕೆ ಕಚೇರಿಗೆ ಭೇಟಿ, ಪರಿಶೀಲನೆ

ರಾಯಚೂರು: ಇಲ್ಲಿನ ಮಹಾನಗರ ಪಾಲಿಕೆ ಕಚೇರಿಗೆ ಲೋಕಾಯುಕ್ತರ ತಂಡ ಮಿಂಚಿನ ಬೇಟಿ ನೀಡಿ ಕಚೇರಿ ಕಾರ್ಯಚಟುವಟಿಕೆಗಳನ್ನು ಖುದ್ದಾಗಿ ಪರಿಶೀಲಿಸಿ ಅವ್ಯವಸ್ಥೆಯನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು.
ಬೆಳಿಗ್ಗೆ ಕಚೇರಿ ಪ್ರಾರಂಭವಾಗುತ್ತಿದ್ದಂತೆ ಲೋಕಾಯುಕ್ತ ನಿಬಂಧಕ ಎ.ವಿ.ಪಾಟೀಲ್ ನೇತೃತ್ವದ ತಂಡ ಪಾಲಿಕೆ ಹಳೆ ಕಚೇರಿಗೆ ಭೇಟಿ ನೀಡಿ ವಿಭಾಗವಾರು ಪರಿಶೀಲನೆ ನಡೆಸಿದರು. ಆಸ್ತಿ ನೊಂದಣಿ, ಕರ ಸಂಗ್ರಹ ವಿಭಾಗ, ತಾಂತ್ರಿಕ ವಿಭಾಗ ಸೇರಿದಂತೆ ಪ್ರತಿ ಸಿಬ್ಬಂದಿ ಬಳಿಯೇ ತೆರಳಿ ಲೋಕಾಯುಕ್ತರು ನಿತ್ಯ ಕಾರ್ಯಚಟುವಟಿಕೆ, ಬಾಕಿಯಿರುವ ಕಡತಗಳ ಮಾಹಿತಿ ಪಡೆದರು.
ಇ-ಖಾತಾ, ಮುಟೇಷನ್, ಕುಡಿಯುವನೀರಿನ ಸಂಪರ್ಕ ಸೇರಿದಂತೆ ಸಾರ್ವಜನಿಕರ ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ಮಾಹಿತಿ ಪಡೆದರು. ಪಾಲಿಕೆ ಕಚೇರಿಯಲ್ಲಿ ಜನರು ನೀಡುವ ದೂರುಗಳು, ಅರ್ಜಿಗಳಿಗೆ ದೂರಿನ ಸಂಖ್ಯೆ ನೀಡದೇ ಇರುವದಕ್ಕೆ ಬೇಸರ ವ್ಯಕ್ತಪಡಿಸಿದ ಲೋಕಾಯುಕ್ತರು ಹೇಗೆ ಕಾರ್ಯನಿರ್ವಹಿಸುತ್ತೀರಿ ಎಂದು ಪ್ರಶ್ನಿಸಿದರು.
ಕುಡಿಯುವ ನೀರು ಹಾಗೂ ಬೀದಿ ದೀಪಗಳ ನಿರ್ವಹಣೆ ಹಾಗೂ ಕಂದಾಯ ಸಂಗ್ರಹದ ಕುರಿತಾಗಿ ಇಲಾಖೆ ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ಅನೇಕ ಸಿಬ್ಬಂದಿಗಳು ಅಸಮರ್ಪಕ ಮಾಹಿತಿ ನೀಡಿದ್ದರಿಂದ ಬೇಸರ ವ್ಯಕ್ತಪಡಿಸಿದರು. ಸಾರ್ವಜನಿಕರು ನಿತ್ಯದ ಕೆಲಸಗಳಿಗೆ ಕಚೇರಿಗೆ ಅಲೆಯುತ್ತಿದ್ದರೂ ಸಕಾಲದಲ್ಲಿ ವಿಲೇವಾರಿ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು ಲೋಪ ಕಂಡು ಬಂದರೆ ಕ್ರಮಕ್ಕೆ ಶಿಫಾರಸ್ಸು ಮಾಡುವದಾಗಿಯೂ ಎಚ್ಚರಿಸಿದರು. ಪಾಲಿಕೆಯ ವಿವಿಧ ವಿಭಾಗಗಳಲ್ಲಿ ಬಾಕಿಯಿರು ಕಡತಗಳ ಮಾಹಿತಿ ನೀಡುವಂತೆ ಸೂಚಿಸಿದರು. ಈ ವೇಳೆ ಸಿಬ್ಬಂದಿಗಳು ಮಾಹಿತಿ ನೀಡಲು ತಡವರಿಸಿದರು. ಅನಗತ್ಯ ಜನರು ಕಚೇರಿಯಲ್ಲಿ ಉಳಿಯಲು ಸಿಬ್ಬಂದಿಗಳೇಕೆ ಸಹಕರಿಸುತ್ತಿರಿ ಎಂದು ಪ್ರಶ್ನಿಸಿದರು.
ಲೋಕಾಯುಕ್ತ ಡಿವೈಎಸ್ಪಿ ಭರತ ರೆಡ್ಡಿ, ಇನ್‌ಸ್ಪೆಕ್ಟರ್ ರಾಜಶೇಖರಯ್ಯ ಸೇರಿ ಸಿಬ್ಬಂದಿಗಳಿದ್ದರು.







