ರಾಯಚೂರು | ಲೋಕಾಯುಕ್ತ ಸಂಸ್ಥೆಯಿಂದ ಸರಕಾರಿ ಅಧಿಕಾರಿಗಳ ಆಸ್ತಿ ವಿವರ ಸಿಗುವಂತಾಗಲಿ : ನಿರುಪಾದಿ ಕೆ.ಗೋಮರ್ಸಿ

ರಾಯಚೂರು : ರಾಜ್ಯ ಸರಕಾರದ ಎಲ್ಲಾ ನೌಕರರು ಮತ್ತು ಅಧಿಕಾರಿಗಳು ಪ್ರತಿ ವರ್ಷ ಕಡ್ಡಾಯವಾಗಿ ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸುವ ಹಾಗೂ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವಂತಹ ವ್ಯವಸ್ಥೆ ಮಾಡಲಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಯುವ ಮುಖಂಡ ನಿರುಪಾದಿ ಕೆ.ಗೋಮರ್ಸಿ ಒತ್ತಾಯಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದಿಂದ ಅಕ್ರಮ ಆಸ್ತಿಗಳಿಕೆಗೆ ಕಡಿವಾಣ ಹಾಕಲು ಗ್ರಾಮ ಪಂಚಾಯತ್ ಸದಸ್ಯರು ಸೇರಿ ರಾಜ್ಯದ ಎಲ್ಲಾ ಜನಪ್ರತಿನಿಧಿಗಳು ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕೆಂಬ ನಿಯಮ ಜಾರಿಯಲ್ಲಿದೆ. ಈ ನಿಯಮ ಸರಕಾರಿ ನೌಕರರು ಮತ್ತು ಅಧಿಕಾರಿಗಳಿಗೆ ಅನ್ವಯವಾಗುವಂಥ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರಕಾರದ ನೌಕರರು ತಮ್ಮ ಆಸ್ತಿ ವಿವರಗಳನ್ನು ಪ್ರತಿ ವರ್ಷ ಲೋಕಪಾಲರಿಗೆ ಕಡ್ಡಾಯವಾಗಿ ಸಲ್ಲಿಸಬೇಕೆಂದು ಲೋಕಪಾಲ ಕಾಯ್ದೆಯ ಸೆಕ್ಷನ್ 44 ಹೇಳುತ್ತದೆ. ಕೇಂದ್ರ ಸರಕಾರದ ನೌಕರರು ಮತ್ತು ಅಧಿಕಾರಿಗಳಿಗೆ ಈ ನಿಯಮ ಅನ್ವಯವಾಗುವಾಗ ರಾಜ್ಯ ಸರಕಾರದ ನೌಕರರು ತಮಗೆ ಇಂಥ ನಿಯಮ ಇರಬಾರದೆಂದು ಹೇಳುವುದು ವಿರೋಧಬಾಸ ಎಂದು ಟೀಕಿಸಿದರು.







