Raichur | ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದೀರ್ಘಕಾಲದ ಸಹಭಾಗಿತ್ವ ಅಗತ್ಯ: ಸಂಸದ ಜಿ.ಕುಮಾರ ನಾಯಕ

ರಾಯಚೂರು : ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿ ಮಾತ್ರವಲ್ಲದೆ, ವಿವಿಧ ಕಂಪನಿಗಳ ಪರಿಣತಿ, ಅನುಭವ, ತಾಂತ್ರಿಕ ಜ್ಞಾನ ಹಾಗೂ ಸಮಾಜದೊಂದಿಗೆ ದೀರ್ಘಕಾಲದ ಸಹಭಾಗಿತ್ವವೂ ಅಗತ್ಯವಾಗಿದೆ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ. ಕುಮಾರ್ ನಾಯಕ ಹೇಳಿದರು.
ನಗರದ ಬಿಜನಗೇರಾ ರಸ್ತೆಯ ನವೋದಯ ತಾಂತ್ರಿಕ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ರಾಯಚೂರು ಮಹಾನಗರ ಪಾಲಿಕೆ ವತಿಯಿಂದ ಶನಿವಾರ ಆಯೋಜಿಸಿದ್ದ ‘ರಾಯಚೂರು ಇಂಪ್ಯಾಕ್ಟ್ ಸಮ್ಮಿಟ್-2026’ ಜಿಲ್ಲಾ ಮಟ್ಟದ ಸಿಎಸ್‌ಆರ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ದಿನಗಳನ್ನು ಸ್ಮರಿಸಿದ ಅವರು, ಸರ್ಕಾರಗಳ ಬಜೆಟ್ ಹೆಚ್ಚಾಗಿದ್ದರೂ ಅಭಿವೃದ್ಧಿಯ ಎಲ್ಲ ಅಗತ್ಯಗಳನ್ನು ಪೂರೈಸಲು ಅದು ಸಾಕಾಗುವುದಿಲ್ಲ. ಆದ್ದರಿಂದ ಸರ್ಕಾರದೊಂದಿಗೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂದರು.
ಕಂಪನಿಗಳು ತಮ್ಮ ಲಾಭದ ಒಂದು ಭಾಗವನ್ನು ಸಮಾಜದ ಅಭಿವೃದ್ಧಿಗೆ ಮೀಸಲಿಡುವ ಉದ್ದೇಶದಿಂದ ಸಿಎಸ್‌ಆರ್ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ ರಾಯಚೂರಿಗೆ ಕೇವಲ ಅನುದಾನ ನೀಡುವುದಷ್ಟೇ ಸಾಕಾಗುವುದಿಲ್ಲ. ಕಂಪನಿಗಳ ಪ್ರತಿನಿಧಿಗಳು ಜಿಲ್ಲೆಗೆ ಬಂದು ಇಲ್ಲಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಮ್ಮ ಪರಿಣತಿಯ ಆಧಾರದ ಮೇಲೆ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಇತರ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಅಭಿವೃದ್ಧಿ ಮಾದರಿಗಳು, ಸಹಕಾರ ಸಂಘಗಳು, ಹೈನುಗಾರಿಕೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಉತ್ತಮ ಅನುಭವಗಳನ್ನು ರಾಯಚೂರಿಗೂ ತರಬೇಕು. ಶಾಲಾ ಕಟ್ಟಡ ನಿರ್ಮಾಣಕ್ಕೆ ಮಾತ್ರ ಸೀಮಿತವಾಗದೆ, ಶಿಕ್ಷಣದ ಗುಣಮಟ್ಟ, ಕೌಶಲ್ಯಾಭಿವೃದ್ಧಿ, ಆರೋಗ್ಯ ಹಾಗೂ ಜನಜೀವನ ಸುಧಾರಣೆಗೆ ಸಂಬಂಧಿಸಿದ ಯೋಜನೆಗಳಿಗೂ ಸಿಎಸ್‌ಆರ್ ಅನುದಾನ ಬಳಸಬೇಕು ಎಂದು ಸಲಹೆ ನೀಡಿದರು.
“ನಮಗೆ ನಿಮ್ಮ ಹಣ ಮಾತ್ರವಲ್ಲ, ನಿಮ್ಮ ಕೌಶಲ್ಯ, ಅನುಭವ, ಸಹಾನುಭೂತಿ ಹಾಗೂ ಸಮಾಜಮುಖಿ ಮನೋಭಾವವೂ ಬೇಕಿದೆ. ಕಂಪನಿಗಳು ರಾಯಚೂರಿನೊಂದಿಗೆ ದೀರ್ಘಕಾಲದ ಪಾಲುದಾರಿಕೆಯನ್ನು ಬೆಳೆಸಿದರೆ ಅದರ ಲಾಭ ಮುಂದಿನ ಪೀಳಿಗೆಗೂ ಸಿಗಲಿದೆ” ಎಂದು ಹೇಳಿದರು.
ಜಿಲ್ಲಾಧಿಕಾರಿ ಪೂವಿತಾ ಎಸ್. ಮಾತನಾಡಿ, ರಾಯಚೂರು ಜಿಲ್ಲೆಯನ್ನು ಮಹತ್ವಾಕಾಂಕ್ಷಿ ಜಿಲ್ಲೆಯಾಗಿ ಗುರುತಿಸಲಾಗಿದೆ. ವಿವಿಧ ವರದಿಗಳಲ್ಲಿ ಜಿಲ್ಲೆಯು ಮಾನವ ಅಭಿವೃದ್ಧಿ ಹಾಗೂ ಸಾಮಾಜಿಕ-ಆರ್ಥಿಕ ಸೂಚ್ಯಂಕಗಳಲ್ಲಿ ಹಿಂದುಳಿದ ಜಿಲ್ಲೆಯಾಗಿ ಗುರುತಿಸಲ್ಪಟ್ಟಿದ್ದು, ಸಿಎಸ್‌ಆರ್ ನೆರವಿನ ಅಗತ್ಯ ಹೆಚ್ಚಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಮಾತನಾಡಿ, ಆರೋಗ್ಯ, ಶಿಕ್ಷಣ, ಪೌಷ್ಟಿಕತೆ, ಜೀವನೋಪಾಯ, ಜಲ ಸಂರಕ್ಷಣೆ ಹಾಗೂ ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ಜಿಲ್ಲೆಯ ಅಗತ್ಯಗಳಿಗೆ ಅನುಗುಣವಾಗಿ ಸಿಎಸ್‌ಆರ್ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ರಾಯಚೂರು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಮಾತನಾಡಿ, ದೇಶದಲ್ಲಿ ಸಿಎಸ್‌ಆರ್ ನಿಧಿಯ ಬಹುಪಾಲು ಕೈಗಾರಿಕಾ ಜಿಲ್ಲೆಗಳಿಗೆ ಹರಿಯುತ್ತಿದೆ. ಆದರೆ ರಾಯಚೂರಿನಂತಹ ಹಿಂದುಳಿದ ಜಿಲ್ಲೆಗಳಲ್ಲಿ ಹೂಡಿಕೆ ಮಾಡಿದರೆ ಅದರ ಸಾಮಾಜಿಕ ಪರಿಣಾಮ ಹಲವು ಪಟ್ಟು ಹೆಚ್ಚಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಇತಿಹಾಸ, ಪ್ರವಾಸೋದ್ಯಮ ಹಾಗೂ ಅಭಿವೃದ್ಧಿ ಸಾಧ್ಯತೆಗಳ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು. ವಿವಿಧ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಅಭಿವೃದ್ಧಿ ಪಾಲುದಾರರಿಗೆ ಪ್ರಶಂಸಾ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯ ನಾಯಕ, ನವೋದಯ ಶಿಕ್ಷಣ ಸಂಸ್ಥೆಯ ರಿಜಿಸ್ಟಾರ್ ಡಾ.ಶ್ರೀನಿವಾಸ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಕಂಪನಿಗಳ ಪ್ರತಿನಿಧಿಗಳು ಇದ್ದರು






