ರಾಯಚೂರು | ನರೇಗಾ ಯೋಜನೆಯಡಿ ಕಡಿಮೆ ಪ್ರಗತಿ : ಎಡಿಗಳಿಗೆ ನೋಟಿಸ್ ನೀಡಲು ಜಿಪಂ ಸಿಇಒ ಸೂಚನೆ

ರಾಯಚೂರು: ಉದ್ಯೋಗ ಖಾತ್ರಿ ಯೋಜನೆಯಡಿ ಕಡಿಮೆ ಪ್ರಗತಿ ಸಾಧಿಸಿದ ಆಯಾ ತಾಲೂಕು ಎಡಿಗಳಿಗೆ ಶೋಕಾಸ್ ನೋಟಿಸ್ ನೀಡಬೇಕು. ಜೊತೆಗೆ ಪಿಡಿಒ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಆಯಾ ತಾಲೂಕು ಪಂಚಾಯತ್ ಇಒಗಳು ಪ್ರತಿ ವಾರ ಸಮನ್ವಯ ನಡೆಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದೂ ಸೂಚನೆ ನೀಡಿದರು.
ಅವರಿಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಪಿಡಿಒ ಹಾಗೂ ತಾಲೂಕು ಪಂಚಾಯತ್ ಇಒಗಳೊಂದಿಗೆ ನರೇಗಾ ಯೋಜನೆಯ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 1,77,208 ಪ್ರಗತಿ ಗುರಿಯಿದ್ದು, ಆದರೆ ಕಳೆದ ತಿಂಗಳು ಕೇವಲ 5,245 ಪ್ರಗತಿ ಗುರಿಯನ್ನು ಸಾಧಿಸಲಾಗಿದೆ. ಪ್ರಸ್ತುತ ಮಾಹೆಯಲ್ಲಿ 16,723 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ರಾಯಚೂರು, ಮಾನ್ವಿ ಹಾಗೂ ದೇವದುರ್ಗ ಎಡಿಗಳು ಪ್ರಗತಿ ಸಾಧಿಸದ ಕಾರಣ ಈ ತಾಲೂಕುಗಳ ನರೇಗಾ ಎಡಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚಿಸಿದರು.
ಕೇವಲ ನೋಟಿಸ್ ಮಾತ್ರವಲ್ಲದೇ ನಿಧಾನ ಗತಿಯಲ್ಲಿ ಪ್ರಗತಿ ಸಾಧಿಸಿದ ಮತ್ತು ಪ್ರಗತಿಯಲ್ಲಿ ಹಿಂದುಳಿದ ಅಧಿಕಾರಿಗಳಿಗೆ ದಂಡ ವಿಧಿಸುವ ಅವಕಾಶವೂ ಇದ್ದು, ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಎಚ್ಚರಿಕೆ ನೀಡಿದರು.
ಆಯಾ ತಾಲೂಕು ಪಂಚಾಯತ್ ಇಒಗಳು ಸಂಬಂಧಪಟ್ಟ ಇಲಾಖೆಗಳ ಸಹಾಯಕ ನಿರ್ದೇಶಕರುಗಳೊಂದಿಗೆ ಸಮನ್ವಯ ಸಭೆ ಮಾಡಬೇಕು. ನಮ್ಮ ಜಿಲ್ಲೆಯಲ್ಲಿ ನೀರು, ಪರಿಸರದ ಸಮಸ್ಯೆಯಿದೆ. ಹಾಗಾಗಿ ತೋಟಗಾರಿಕೆಯಲ್ಲಿ ಹೆಚ್ಚಿನ ಕೆಲಸಗಳು ಆಗಬೇಕು. ನರ್ಸರಿ ಬಹಳ ಕಡಿಮೆಯಿದೆ ನರ್ಸರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ನರೇಗಾದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಪ್ರತಿ ವಾರ ಸಭೆಗಳು ಆಗಬೇಕು. ಹೆಸರಿಗೆ ಅಷ್ಟೇ ಸಭೆಗಳು ಆಗಬಾರದು. ಪಿಡಿಒಗಳು ಮೇಜರ್ ಪ್ಯಾರಾಗಳನ್ನು ಕ್ಲಿಯರ್ ಮಾಡುತ್ತಿಲ್ಲ. ಇಒಗಳು ಕೂಡ ಸರಿಯಾಗಿ ಗಮನಹರಿಸುತ್ತಿಲ್ಲ. ಅವರಿಗೂ ಜವಾಬ್ದಾರಿ ಇರಬೇಕು. ಮುಂದಿನ ಸಭೆಯಲ್ಲಿ ಯೋಜನಾ ಬದ್ಧವಾಗಿ ಪ್ಯಾರಾ ಗಳನ್ನು ಕ್ಲಿಯರ್ ಮಾಡಬೇಕು ಎಂದರು.
ರಾಯಚೂರು, ಮಾನ್ಚಿ ಮಸ್ಕಿ ವಲಯ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಗತಿ ಸಾಧಿಸಲು ಕ್ರಮ ವಹಿಸಬೇಕು. ರೇಷ್ಮೆ ಇಲಾಖೆಯಲ್ಲಿ ಮಸ್ಕಿಯಲ್ಲಿ ಶೂನ್ಯ ಪ್ರಗತಿ ಸಾಧಿಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಪ್ರಗತಿ ಸಾಧಿಸಿ ವರದಿ ಸಲ್ಲಿಸಬೇಕು ಎಂದರು.
ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 29 ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, ಮುಂದಿನ ಸಭೆಯೊಳಗೆ ಪೂರ್ಣಗೊಳ್ಳಬೇಕು. ಸಿಂಧನೂರು ತಾಲೂಕಿನ ಗುಂಜಳ್ಳಿ ಯಲ್ಲಿ ಒಂದೂ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆರ್.ಸಿದ್ದಪ್ಪ ಪೂಜಾರಿ, ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಮುಖ್ಯ ಯೋಜನಾ ನಿರ್ದೇಶಕ ಶರಣಬಸವ, ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ ಸೇರಿದಂತೆ ವಿವಿಧ ತಾಲೂಕುಗಳ ಇಓ, ಗ್ರಾ.ಪಂ ಪಿಡಿಓಗಳು ಉಪಸ್ಥಿತರಿದ್ದರು.







