ರಾಯಚೂರು | ಆಮ್ ತಲಾಬ್ ಟ್ಯಾಂಕ್‌ಬಂಡಾ ರಸ್ತೆಯ ಅಗಲೀಕರಣಕ್ಕೆ ಮಹಾನಗರ ಪಾಲಿಕೆಯಿಂದ ರಸ್ತೆ ಬದಿಯ ಅಂಗಡಿ ತೆರವು

ರಾಯಚೂರು : ನಗರದ ಆಮ್ ತಲಾಬ್ ಟ್ಯಾಂಕ್‌ಬಂಡಾ ರಸ್ತೆ ಅಗಲೀಕರಣ ಕಾರ್ಯಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದು, ರಸ್ತೆ ಬದಿಯಲ್ಲಿದ್ದ ಸಣ್ಣಪುಟ್ಟ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ಈ ಹಿಂದೆ ರಸ್ತೆ ಮಧ್ಯಭಾಗದಿಂದ 20 ಅಡಿ ತೆರವುಗೊಳಿಸಲಾಗಿತ್ತು. ಇದೀಗ ಹೆಚ್ಚುವರಿಯಾಗಿ 8.4 ಅಡಿ ವಿಸ್ತರಣೆಗಾಗಿ ಅಂಗಡಿಗಳನ್ನು ತೆರವು ಮಾಡಲಾಗಿದೆ. ಆದರೆ ನಗರದಲ್ಲಿನ ಹಲವು ರಸ್ತೆಗಳಲ್ಲಿ ಅಗಲೀಕರಣ ಕಾರ್ಯವನ್ನು ಅರ್ಧಂಬರ್ಧವಾಗಿ ನಡೆಸಲಾಗುತ್ತಿದೆ. ರಸ್ತೆ ಅಗಲೀಕರಣ ಮಾಡಬೇಕಾದರೆ ಒಂದು ಕಡೆಯಿಂದ ಸಂಪೂರ್ಣ ಪ್ರಮಾಣದಲ್ಲಿ ಮಾಡಬೇಕು ಎಂದು ನಗರ ನಿವಾಸಿ ಅನುಪಮಾ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದರು.
ತೆರವಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರೂ, ಈ ಕಾರ್ಯಾಚರಣೆಯಿಂದ ದಿನನಿತ್ಯದ ವ್ಯಾಪಾರವನ್ನೇ ನಂಬಿಕೊಂಡಿದ್ದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ನಗರದಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರ, ಅಪಘಾತಗಳ ನಿಯಂತ್ರಣ ಹಾಗೂ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ರಸ್ತೆ ಅಗಲೀಕರಣ ಅನಿವಾರ್ಯ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಆದರೆ ಹಲವು ವರ್ಷಗಳಿಂದ ಅಲ್ಲಿಯೇ ಅಂಗಡಿಗಳನ್ನು ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಾಪಾರಸ್ಥರಿಗೆ ಈ ತೆರವು ಕಾರ್ಯ ಭಾರೀ ಆಘಾತ ತಂದಿದೆ. ವ್ಯಾಪಾರಸ್ಥರಿಗೆ ಸಾಕಷ್ಟು ಸಮಯ ನೀಡಬೇಕಿತ್ತು. ಜೊತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ನಿವಾಸಿ ರಮಾ ಗೋನ್ವಾರ್ ಒತ್ತಾಯಿಸಿದರು.
ತೆರವು ಕಾರ್ಯದ ವೇಳೆ ಕೆಲಕಾಲ ರಸ್ತೆ ಮೇಲೆ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ವ್ಯಾಪಾರಸ್ಥರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ರಸ್ತೆ ಅಗಲೀಕರಣದಿಂದ ನಗರ ಅಭಿವೃದ್ಧಿ ಅಗತ್ಯವಾದರೂ, ಜೀವನೋಪಾಯ ಕಳೆದುಕೊಳ್ಳುತ್ತಿರುವ ಸಣ್ಣ ವ್ಯಾಪಾರಸ್ಥರಿಗೆ ಪರಿಹಾರ ಹಾಗೂ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.







