ರಾಯಚೂರು| ಕಲಮಲಾದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ರಾಯಚೂರು: ಆದಿಕವಿ ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ಮಹಾಕಾವ್ಯ ಮಾನವೀಯ ಮೌಲ್ಯಗಳು, ಸತ್ಯ, ನಿಷ್ಟೆ, ಧರ್ಮ, ನ್ಯಾಯ, ಆದರ್ಶ ಜೀವನ ನಡೆಸಲು ಕಲಿಸುತ್ತದೆ. ಯುವಕರು ಜಾತಿ, ಧರ್ಮ ಭೇದ ಭಾವ ವಿಲ್ಲದೆ ಮಹನಿಯರ ಆದರ್ಶಗಳನ್ನು ಸಮಾನತೆ, ಸಹೋದರತ್ವದ ತತ್ವಗಳ ಆಧಾರದ ಮೇಲೆ ಸಮಾಜವನ್ನು ಕಟ್ಟಲು ಮುಂದಾಗಬೇಕು ಎಂದು ಅತಿಥಿ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಜಿ.ಕೆ ನಾಗರಾಜ ತಿಳಿಸಿದರು.
ರಾಯಚೂರು ತಾಲೂಕಿನ ಕಲ್ಮಲಾ ಗ್ರಾಮದ ಜನತಾ ಕಾಲೋನಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಸಂಸ್ಕೃತಿಕ ಮತ್ತು ಸಾಹಿತ್ಯಕ ಪರಂಪರೆಯಲ್ಲಿ ಮಹರ್ಷಿ ವಾಲ್ಮೀಕಿಯವರ ಹೆಸರು ಅತ್ಯಂತ ಗೌರವದಿಂದ ಸ್ಮರಿಸಲಾಗುತ್ತದೆ. ಮಹರ್ಷಿ ವಾಲ್ಮೀಕಿ ಯವರನ್ನು ಸಂಸ್ಕೃತ ಸಾಹಿತ್ಯದ ಆದಿಕವಿ ಎಂದು ಕರೆಯಲಾಗುತ್ತದೆ. ರಾಮಾಯಣವು ಶ್ರೀ ರಾಮನ ಜೀವನ ಕಥೆಯಷ್ಟೇ ಅಲ್ಲದೆ ಆದರ್ಶ ಕುಟುಂಬ, ಕರ್ತವ್ಯ ನಿಷ್ಠೆ, ಸಹೋದರತ್ವ, ಪ್ರೀತಿ, ತ್ಯಾಗ, ಸತ್ಯ, ನಿಷ್ಠೆ, ಧರ್ಮ ಪಾಲನೆಯಂತಹ ಜೀವನ ಮೌಲ್ಯಗಳನ್ನು ತಿಳಿಸುವ ಮಹಕಾವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕ ಸುಮಲತಾ ಬಿ, ಸಹ ಶಿಕ್ಷಕಿ ಸಂಗಮೇಶ್ವರಿ, ಎಸ್ ಡಿಎಂಸಿ ಅಧ್ಯಕ್ಷ ಚಂದ್ರಕಲಾ, ನಾಗರಾಜ ಉಪಸ್ಥಿತರಿದ್ದರು.




