Raichur | ಎಸ್ಐಆರ್ ಪ್ರಕ್ರಿಯೆ ವಿರೋಧಿಸಿ ಬೃಹತ್ ಪ್ರತಿಭಟನೆ

ರಾಯಚೂರು: ಎಸ್ಐಆರ್ ಪ್ರಕ್ರಿಯೆಯಿಂದ ಅರ್ಹ ಮತದಾರರ ಹಕ್ಕನ್ನು ಕಸಿದುಕೊಳ್ಳುತ್ತಿರುವ ವ್ಯವಸ್ಥೆಯನ್ನು ಬದಲಿಸಿ ರಾಜ್ಯ ಸರ್ಕಾರ ಮತದಾರರ ಹಕ್ಕನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿ ಎಸ್ಐಆರ್ ವಿರೋಧ ಜಾತ್ಯತೀತ ಪಕ್ಷಗಳು-ಜನಪರ ಸಂಘಟನೆಗಳ ಒಕ್ಕೂಟ ಕರ್ನಾಟಕ ವತಿಯಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ಶನಿವಾರ ನಡೆಯಿತು.
ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ರಸ್ತೆ ಮಾರ್ಗವಾಗಿ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಬಹಿರಂಗ ಸಭೆ ನಡೆಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ದೇಶದ ಪ್ರಜಾತಂತ್ರ ವ್ಯವಸ್ಥೆಯ ಅಡಿಪಾಯವನ್ನು ಬುಡಮೇಲು ಮಾಡುತ್ತಿರುವ ಹಾಗೂ ಸಂವಿಧಾನದ ನಿರ್ದೇಶನದ ವಿರುದ್ಧ ದಿಕ್ಕಿನಲ್ಲಿ ದೇಶವನ್ನು ಎಳೆದೊಯ್ಯುವ ಪ್ರಯತ್ನಿಸುತ್ತಿರುವ ಎಸ್ ಐಆರ್ ಮೂರನೇ ಸುತ್ತಿನ ದಾಳಿ ನಡೆಸುತ್ತಿದೆ. ಕರ್ನಾಟಕ ರಾಜ್ಯ ಅಪಾಯದ ಹೊಸ್ತಿಲಿನಲ್ಲಿ ನಿಂತಿದೆ. ಆದರೆ ಕರ್ನಾಟಕ ಸರ್ಕಾರ ಈ ದುಷ್ಟ ಯೋಜನೆ ತಾತ್ವಿಕವಾಗಿ ವಿರೋಧಿಸಿದರೆ ಸಾಲದು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮತದಾರರ ಪಟ್ಟಿಯಿಂದ ಒಬ್ಬ ಅರ್ಹ ಮತದಾರರೂ ಹೊರಗುಳಿಯದಂತೆ ನೋಡಿಕೊಳ್ಳಲು ಹಾಲಿ SIR ಪ್ರಕ್ರಿಯೆಯಲ್ಲಿ ಅಗತ್ಯ ಬದಲಾವಣೆಗಳನ್ನು ತರಬೇಕು ಎಂದು ಒತ್ತಾಯಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಹಿರಿಯ ಹೋರಾಟಗಾರರಾದ ರಾಘವೇಂದ್ರ ಕುಷ್ಠಗಿ ಮಾತನಾಡಿ, ಮೊದಲು ದೇಶದ ಮತದಾರರು ಸರ್ಕಾರ ರಚನೆ ಮಾಡುತ್ತಿದ್ದರು ಈಗ ಸರ್ಕಾರ ಮತದಾರರನ್ನು ರಚನೆ ಮಾಡುತ್ತಿರುವುದು ದುರದೃಷ್ಟಕರ ಸಂಗತಿ. ಎಸ್ ಐ ಆರ್ ಮೂಲಕ ಕೇಂದ್ರ ಸರ್ಕಾರ ಅರಾಜಕತೆ ಸೃಷ್ಠಿ ಮಾಡಲು ಹೊರಟಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ತಮ್ಮ ಕೈಯಲ್ಲಿಟ್ಟುಕೊಂಡು ಹತೋಟಿಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ದೂರಿದರು.
'ಲಾಜಿಕಲ್ ಡಿಸ್ಟ್ರಿಪೆನ್ಸಿ' ಎನ್ನುವ ಅತಂತ್ಯ ಅವೈಜ್ಞಾನಿಕ, ಅವಾಸ್ತವಿಕ, ಅಪಾರದರ್ಶಕ ಹಾಗೂ ದುರುದ್ದೇಶಪೂರಿತ ವಿಧಾನವನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಅಳವಡಿಸಬಾರದು ಸ್ಪೆಲ್ಲಿಂಗ್, ದಿನಾಂಕ ಇಂತಹ ಕ್ಷುಲ್ಲಕ ವಿಚಾರಗಳನ್ನು ಇಟ್ಟುಕೊಂಡು ಮತದಾನದ ಹಕ್ಕಿನಿಂದ ಯಾರನ್ನೇ ಹೊರಗಿಡುವುದು ಅಕ್ಷಮ್ಯ ಅಪರಾಧ. ಮತದಾರರ ಪಟ್ಟಿ ಎಂಬುದು ರಹಸ್ಯ ದಾಖಲೆಯಲ್ಲ ಅದು ದೇಶದ ಮತದಾರರ ಮುಕ್ತ ಪಟ್ಟಿ ಕರಡು ಪಟ್ಟ ತಯಾರಾದ ನಂತರ ಯಾರ ಮತವನ್ನಾದರೂ ಸುಲಭವಾಗಿ ಹುಡುಕಬಹುದಾದ ರೀತಿಯಲ್ಲಿ ಪಾರದರ್ಶಕತೆ ಇರುವ ರೀತಿಯಲ್ಲಿ ಅದನ್ನು ಕಂಪ್ಯೂಟರ್ ರೀಡಬಲ್ ಫಾರ್ಮ್ಯಾಟಿ'ನಲ್ಲಿ ನೀಡಬೇಕು ಎಂದು ಆಗ್ರಹಿಸಿದರು.
ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಮುನ್ನ ಚುನಾವಣಾ ಆಯೋಗದ ಮ್ಯಾನ್ಯುಯಲ್‌ನಲ್ಲಿ ಇರುವ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು: ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಪ್ರದೇಶಗಳಲ್ಲಿ ಆ ಭಾಗದ ಮತದಾರರ ಕರಡು ಪಟ್ಟಿಯನ್ನು ಬಹಿರಂಗವಾಗಿ ಪ್ರಕಟಿಸಿ, ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಿ, ಮುಕ್ತವಾದ ರೀತಿಯಲ್ಲಿ ಎಲ್ಲರ ಸಮ್ಮುಖದಲ್ಲಿ ತಿದ್ದುಪಡಿಗಳನ್ನು ಮಾಡಬೇಕು ಎಂದು ಒತ್ತಾಯಿಸಿದರು.
ಈ ಪ್ರಕ್ರಿಯೆಯನ್ನು ಗಡಿಬಿಡಿಯಲ್ಲಿ ನಡೆಸಬಾರದು. ಕನಿಷ್ಠ 1 ವರ್ಷಗಳ ಅವಧಿ ನಿಗದಿ ಮಾಡಬೇಕು. ಮತದಾರರ ಪಟ್ಟಿಯ ಪರಿಶೀಲನೆ ನಡೆಸಿ ಕರಡು ಪಟ್ಟಿ ತಯಾರಿಸಲು ಕರಡನ್ನು ಸಾರ್ವಜನಿಕ ಪರಿಶೀಲನಗೆ ಒಳಪಡಿಸಲು ಹಾಗೂ ಅಹವಾಲುಗಳನ್ನು ಸ್ವೀಕರಿಸಿ ಅಂತಿಮ ಪಟ್ಟಿ ತಯಾರಿಸಲು 6 ತಿಂಗಳು ಸಮಯ ಇರಬೇಕು ಎಂದು ಆಗ್ರಹಿಸಿದರು.
ವಿವಾಹಿತ ಮಹಿಳೆಯರು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಅಲೆಮಾರಿಗಳು, ಆದಿವಾಸಿಗಳು, ದಲಿತರು, ಬಡ ಅಲ್ಪಸಂಖ್ಯಾತರು ಮುಂತಾದ ದಾಖಲೆಗಳ ಗಂಭೀರ ಸಮಸ್ಯೆ ಎದುರಿಸುತ್ತಿರುವ ಜನ ವರ್ಗಗಳು ಪ್ರಜಾತಾಂತ್ರಿಕ ಪ್ರಕ್ರಿಯೆಯಿಂದ ವಂಚಿತರಾಗದಂತೆ ಒಳಗೊಳ್ಳಲು ಅವರಿಗಾಗಿ ವಿಶೇಷ ಸರಳ ಕ್ರಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ರಾಯಚೂರು ನಗರದ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮೊಹಮ್ಮದ್ ಶಾಲಂ, ಎದ್ದೇಳು ಕರ್ನಾಟಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ಶರಣುಕುಮಾರ ಮುದ್ದಮಗುಡ್ಡಿ, ಮಾರೆಪ್ಪ ಹರವಿ, ಅಂಬಣ್ಣ ಅರೋಲಿ, ಡಿ.ಹೆಚ್.ಪೂಜಾರ್, ಎಂ.ಆರ್. ಬೇರಿ, ಬಿ.ಆರ್ ಯರದಿಹಾಳ, ಜಮಾತೆ ಇಸ್ಲಾಂ ಜಿಲ್ಲಾಧ್ಯಕ್ಷ ಅಸಿಮುದ್ದೀನ್ ಅಖ್ತರ್, ಸಮದ್ ಪಾಶ, ಆಂಜನೇಯ ಕುರುಬದೊಡ್ಡಿ, ಕೆ.ಪಿ ಅನಿಲ್ ಕುಮಾರ, ಫೈಸಲ್ ಖಾನ್, ಜನಾರ್ಧನ ಹಳ್ಳಿಬೆಂಚಿ, ವೆಲ್ ಫೇರ್ ಪಾರ್ಟಿಯ ಫರೀದ್ ಉಮ್ರಿ, ಅಬ್ದುಲ್ ಘನಿ, ಸಾಧಿಕ್ ಪಾಷಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.






