ರಾಯಚೂರು| ಅಪರಾಧ ತಡೆ ಜಾಗೃತಿಗಾಗಿ ಬ್ಯಾಂಕ್‍ಗಳ ವ್ಯವಸ್ಥಾಪಕರೊಂದಿಗೆ ಸಭೆ

ರಾಯಚೂರು: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಪರಾಧಗಳನ್ನು ತಡೆಗಟ್ಟಲು ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಎಲ್ಲ ಬ್ಯಾಂಕ್‍ಗಳ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.
ಪೊಲೀಸ್ ಠಾಣೆಗಳಲ್ಲಿ ಇರುವಂತೆ ಬ್ಯಾಂಕ್‍ಗಳಲ್ಲಿಯೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಹಾಗೂ ಒಂದು ವರ್ಷದವರೆಗೂ ಮಾಹಿತಿ ಸಂಗ್ರಹಣೆಯಾಗುವ ರೀತಿಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಪ್ರತಿಯೊಂದು ಬ್ಯಾಂಕ್‍ನಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಸೈಬರ್ ಸಹಾಯವಾಣಿ 1930 ಹಾಗೂ ಇತರ ಸೈಬರ್ ಅಪರಾಧಗಳ ತಡೆಗಟ್ಟಲು ಜಾಗೃತಿ ಸಂದೇಶಗಳ ನಾಮಫಲವನ್ನು ಹಾಕಬೇಕು. ಕರೆಂಟ್ ಖಾತೆಗಳನ್ನು ತೆಗೆಯುವಾಗ ಕಡ್ಡಾಯವಾಗಿ ಸ್ಥಳ ಪರಿಶೀಲಿಸುವುದು ಹಾಗೂ ಬ್ಯಾಂಕ್ ಗ್ರಾಹಕರು ಆನ್ಲೈನ್‍ನಲ್ಲಿ ಹಣ ವರ್ಗಾವಣೆ ಮಾಡಬೇಕಾದಲ್ಲಿ ವಹಿಸಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಗಮನಹರಿಸಬೇಕು ಎಂದು ಸೂಚನೆ ನೀಡಿದರು.
ಗ್ರಾಹಕರು ಹಣವನ್ನು ಡ್ರಾ ಮಾಡಿಕೊಂಡು ಹೋಗುವಾಗ ಅವರ ಗಮನವನ್ನು ಬೇರೆಡೆಗೆ ಸೆಳೆದು ಹಣ ಕದಿಯುವ ಸಾಧ್ಯತೆ ಈ ಕುರಿತು ಗ್ರಾಹಕರಿಗೆ ತಿಳುವಳಿಕೆ ನೀಡಬೇಕು, ಸದಾಕಾಲ ಬ್ಯಾಂಕ್ ಮತ್ತು ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡುಗಳು ಕರ್ತವ್ಯ ನಿರ್ವಹಿಸುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಸೈಬರ್ ಅಪರಾಧ ವಿಭಾಗದ ಡಿವೈಎಸ್‌ಪಿ ವೆಂಕಟೇಶ್, ರಾಯಚೂರು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಧೀಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.





