ರಾಯಚೂರು | ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಹಂಗಾಮಿ ಅಧ್ಯಕ್ಷರನ್ನು ನೇಮಿಸಲು ಮೇಟಿಗೌಡ ಒತ್ತಾಯ

ರಾಯಚೂರು : ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಉದ್ಭವಿಸಿರುವ ಗೊಂದಲದ ಹಿನ್ನೆಲೆ, ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ತಕ್ಷಣವೇ ರಾಜೀನಾಮೆ ನೀಡಿ ಹಂಗಾಮಿ ಅಧ್ಯಕ್ಷರನ್ನು ನೇಮಿಸಬೇಕು ಎಂದು ಬೆಳಕು ಟ್ರಸ್ಟ್ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ಒತ್ತಾಯಿಸಿದ್ದಾರೆ.
ಗುರುವಾರ ನಗರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಸಾಪವು ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸುವ ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ಜಿಲ್ಲಾಧ್ಯಕ್ಷರ ತಪ್ಪಾದ ನಿರ್ಧಾರಗಳಿಂದ ಸಂಸ್ಥೆಯ ಘನತೆಗೆ ಧಕ್ಕೆ ತಲುಪಿದೆ. ಇತ್ತೀಚಿಗೆ ತಾಲೂಕು ಅಧ್ಯಕ್ಷರ ನೇಮಕಾತಿ ಕುರಿತು ಹೊರಡಿಸಿದ ಆದೇಶ ಕಸಾಪ ಬೈಲಾ ಪ್ರಕಾರ ತಪ್ಪಾಗಿದೆ. ಇದರ ವಿರುದ್ಧ ಈಗಾಗಲೇ ಲೀಗಲ್ ನೋಟಿಸ್‌ಗಳು ನೀಡಲ್ಪಟ್ಟಿವೆ. ಇಂತಹ ಕ್ರಮಗಳಿಂದ ಹೊಸದಾಗಿ ನೇಮಕಗೊಂಡವರಿಗೂ ಮುಜುಗರ ಉಂಟಾಗಿದೆ ಎಂದು ಟೀಕಿಸಿದರು.
ನಾಲ್ಕು ವರ್ಷಗಳಿಂದ ಜಿಲ್ಲಾಧ್ಯಕ್ಷರಾಗಿದ್ದರೂ ರಂಗಣ್ಣ ಪಾಟೀಲ್ ಯಾವುದೇ ಪ್ರಾಮುಖ್ಯ ಕಾರ್ಯ ನಡೆಸಿಲ್ಲ. ಜಿಲ್ಲಾ ಸಮ್ಮೇಳನ, ಕಥಾ ಕಮ್ಮಟಗಳಂತಹ ಪ್ರಮುಖ ಕಾರ್ಯಕ್ರಮಗಳು ಕೈಗೂಡಲಿಲ್ಲ. ರಾಜ್ಯ ಮಟ್ಟದಲ್ಲಿಯೂ ಅವರ ನಿರ್ಲಕ್ಷ್ಯದಿಂದ ರಾಯಚೂರಿನ ಪ್ರತಿನಿಧಿತ್ವ ದುರ್ಬಲಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಕಾರ್ಯಕ್ಕೆ ಬದ್ಧರಾಗಿರುವವರನ್ನು ಹಂಗಾಮಿ ಜಿಲ್ಲಾಧ್ಯಕ್ಷರಾಗಿ ನೇಮಿಸಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಲಾ ಸಂಕಲ ಸಂಸ್ಥೆಯ ಸ್ಥಾಪಕರಾದ ಮಾರುತಿ ಬಡಿಗೇರ್ ಮತ್ತು ಅಂಬು ಪಾಟೀಲ್ ಹಾಜರಿದ್ದರು.







