ರಾಯಚೂರು | ಪರಿಸರ, ಅರಣ್ಯ ಅಧಿಕಾರಿಗಳೊಂದಿಗೆ ಸಚಿವ ಈಶ್ವರ್ ಖಂಡ್ರೆ ಪರಾಮರ್ಶನ ಸಭೆ
ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ, ಬಳ್ಳಾರಿ, ವಿಜಯಪುರ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶ ವಿಸ್ತರಿಸಿ : ಈಶ್ವರ್ ಖಂಡ್ರೆ ಸಲಹೆ

ರಾಯಚೂರು : ಅಲ್ಪ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಹೊಂದಿರುವ ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ, ಬಳ್ಳಾರಿ ಹಾಗೂ ಬೀದರ್ ಜಿಲ್ಲೆ ಸೇರಿದಂತೆ ಹಸಿರು ವ್ಯಾಪ್ತಿ ಕಡಿಮೆ ಇರುವ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಸಿನೆಟ್ಟು ನೀರುಣಿಸಿ, ಜಿಯೋ ಟ್ಯಾಗ್ ಮಾಡಿ ಸಂರಕ್ಷಣೆ ಮಾಡಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಅವರು ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜ.27ರ ಸೋಮವಾರ, ನಗರದ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಪರಿಸರ ಮತ್ತು ಅರಣ್ಯ ಅಧಿಕಾರಿಗಳೊಂದಿಗಿನ ಪರಾಮರ್ಶನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಯಾರಾದರು ಅರಣ್ಯ ಪ್ರದೇಶ ಒತ್ತುವರಿ ಮಾಡಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಂಡು, ಅರಣ್ಯ ಒತ್ತುವರಿಯನ್ನು ತಕ್ಷಣದಿಂದಲೇ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮವಹಿಸಬೇಕು. ಕ್ರಮದ ಬಗ್ಗೆ ಶೀಘ್ರವೇ ವಿವರವಾದ ವರದಿ ಸಲ್ಲಿಸಬೇಕು ಎಂದು ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ರಾಯಚೂರು, ಯಾದಗಿರಿ, ವಿಜಯಪುರ, ಕಲಬುರಗಿ, ಬಳ್ಳಾರಿ ಹಾಗೂ ಬೀದರ್ ಜಿಲ್ಲೆ ಸೇರಿದಂತೆ ಹಸಿರು ವ್ಯಾಪ್ತಿ ಕಡಿಮೆ ಇರುವ ಈ ಜಿಲ್ಲೆಗಳಲ್ಲಿ ಇರುವ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆ ಮತ್ತು ಗ್ರಾಮೀಣ ರಸ್ತೆಗಳಲ್ಲಿ ಸಸಿಗಳನ್ನು ನೆಡದೇ ಖಾಲಿ ಬಿಟ್ಟಿರುವುದನ್ನು ಸರಿಯಾಗಿ ಗುರುತಿಸಿ ರಸ್ತೆಯ ಎರಡೂ ಬದಿಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕು. ಅದಕ್ಕೆ ಈಗಿನಿಂದಲೇ ರಸ್ತೆಗಳನ್ನು ಗುರುತಿಸಿ, ಕಾರ್ಯಯೋಜನೆ ರೂಪಿಸುವಂತೆ ಮತ್ತು ನರ್ಸರಿಗಳಲ್ಲಿ ಎತ್ತರದ ಗಿಡಗಳನ್ನು ಬೆಳೆಸುವಂತೆ ಸಚಿವರಾದ ಈಶ್ವರ್ ಖಂಡ್ರೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಲೆ ಉದುರಿಕೆ ತಡೆಗೆ ಒತ್ತು ಕೊಡಿ :
ದೇವದುರ್ಗ ತಾಲೂಕಿನ ಬಂಕಲದೊಡ್ಡಿ ಹಾಗೂ ಜಾಲಹಳ್ಳಿ ಅರಣ್ಯ ಪ್ರದೇಶದಲ್ಲಿನ ಮರಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಎಲೆಗಳು ಉದುರುತ್ತಿದ್ದು, ಸಂಬಂಧಿಸಿದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ವರದಿ ಸಲ್ಲಿಸಬೇಕೆಂದು ಸಚಿವರು ಹೇಳಿದರು.
ಕಾಮಗಾರಿ ಸರಿಯಾಗಿ ನಡೆಯಲಿ :
ಸಿಂಧನೂರು ತಾಲೂಕಿನಲ್ಲಿ ಕಳೆದೆರಡು ವರ್ಷಗಳಿಂದ ಟ್ರೀ ಪಾರ್ಕ್ ಕಾಮಗಾರಿ ನಡೆಯುತ್ತಿದ್ದು, ಬೌಂಡರಿ ಸಹ ಫಿಕ್ಸ್ ಮಾಡಲಾಗಿದೆ. ಅದಕ್ಕಾಗಿ 50 ಲಕ್ಷ ರೂ. ಅನುದಾನ ಕೇಳಲಾಗಿದೆ. ಕಾಮಗಾರಿಯು ಗುಣಮಟ್ಟದಿಂದ ನಡೆಯಬೇಕು. ಪ್ರತಿ ತಿಂಗಳು ಸಭೆ ನಡೆಸಿ ಈ ಬಗ್ಗೆ ಪರಿಶೀಲಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನರೇಗಾ ಯೋಜನೆಯಡಿ ಸಸಿ ನೆಡಲು ಸೂಚನೆ :
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರಾಯಚೂರು ಜಿಲ್ಲೆಯ ಎಲ್ಲಾ ವಿಧಾನಸಭಾ ಪ್ರದೇಶದಲ್ಲಿ ಸುಮಾರು 1.12 ಲಕ್ಷ ಸಸಿಗಳನ್ನು ನೆಡಲಾಗಿದ್ದು, ಅವುಗಳ ಲಾಲನೆಪಾಲನೆ ಸರಿಯಾಗಿ ಆಗಬೇಕು ಹಾಗೂ ರೈತರಿಗೆ ರಿಯಾಯಿತಿ ದರದಲ್ಲಿ ಹೆಚ್ಚಿನ ಸಸಿಗಳನ್ನು ವಿತರಣೆ ಮಾಡಿ ಪರಿಸರ ಬೆಳವಣಿಗೆ ಶ್ರಮಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನರ್ಸರಿಗಳ ಸಂಖ್ಯೆ ಹೆಚ್ಚಿಸಿ :
ಪರಿಸರದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಸಿಗಳನ್ನು ನೆಟ್ಟು ಪೋಷಿಸಬೇಕು. ನರ್ಸರಿಗಳ ಸಂಖ್ಯೆಗಳನ್ನು ಹೆಚ್ಚಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದರು.
ಮೊಸಳೆ ದಾಳಿಗೊಳಗಾದ ಬಾಲಕನ ಕುಟುಂಬಕ್ಕೆ ಪರಿಹಾರ ನೀಡಿ :
ಜಿಲ್ಲೆಯ ಕೃಷ್ಣ ನದಿಯ ಗಂಗಮ್ಮ ಗಡ್ಡೆ ಹತ್ತಿರ 2024ರ ಮೇ 24ರಂದು ವಿಶ್ವನಾಥ ಭಜಂತ್ರಿ ಎಂಬ ಬಾಲಕ ಮೊಸಳೆ ದಾಳಿಗೆ ಒಳಗಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ವಾಸ್ತವಂಶ ಅರಿತು ಕುಟುಂಬಕ್ಕೆ ನೆರವು ಒದಗಿಸಲು ಅಗತ್ಯ ಕ್ರಮ ವಹಿಸಬೇಕೆಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಸಿಂಧನೂರು ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ, ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ್, ಲೋಕಸಭಾ ಸದಸ್ಯರಾದ ಜಿ.ಕುಮಾರ ನಾಯಕ, ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.







