Raichur| ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಪ್ರಕರಣ : ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ 55 ಸಾವಿರ ದಂಡ

ಸಿಂಧನೂರು: ಸಿಂಧನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2023 ಸೆಪ್ಟೆಂಬರ್ ನಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಪೋಕ್ಸೋ ನ್ಯಾಯಾಲಯ, ಪೀಠಾಸೀನ ಸಿಂಧನೂರು ನ್ಯಾಯಾಲಯವು ಆರೋಪಿಗೆ 55 ಸಾವಿರ ದಂಡ ಸಹಿತ 20 ವರ್ಷ ಕಠಿಣ ಶಿಕ್ಷೆ ವಿಧಿಸಿ, 2025 ಡಿ.1 ರಂದು ಆದೇಶ ನೀಡಿದೆ.
ಸಿಂಧನೂರು ನಗರದ ನಿವಾಸಿ ಅಮೀನ್ ಸಾಬ್ (43) ಶಿಕ್ಷೆಗೆ ಗುರಿಯಾದ ಆರೋಪಿ. ಸಂತ್ರಸ್ತೆಯ ತಂದೆ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ ಅಂದಿನ ಆರಕ್ಷಕ ನಿರೀಕ್ಷಕರಾದ ದುರುಗಪ್ಪ ಇವರು ಆರೋಪಿಯ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿಯ ಪತ್ರವನ್ನು ಸಲ್ಲಿಸಿದ್ದರು.
ಸಾಕ್ಷಿ ಪುರಾವೆಗಳನ್ನು ಪರಿಶೀಲಿಸಿ, ಆರೋಪಿಯ ಮೇಲಿನ ಆಪಾದನೆ ಸಾಬೀತಾಗಿದೆಯೆಂದು 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ಪೋಕ್ಸೋ ವಿಶೇಷ ನ್ಯಾಯಾಲಯ ನ್ಯಾಯಾಧೀಶರಾದ ಬಿ.ಬಿ.ಜಕಾತಿಯವರು ಶಿಕ್ಷೆ ವಿಧಿಸಿ, ತೀರ್ಪು ನೀಡಿದ್ದಾರೆ.
ಅದರಂತೆ ಆರೋಪಿಗೆ 20 ವರ್ಷಗಳ ಕಾಲ ಕಠಿಣ ಶಿಕ್ಷೆ 55 ಸಾವಿರ ದಂಡವನ್ನು ವಿಧಿಸಲಾಗಿದೆ. ಮತ್ತು ಸರ್ಕಾರದ ಸಂತ್ರಸ್ತರ ಪರಿಹಾರ ನಿಧಿಯಿಂದ ನೊಂದ ಬಾಲಕಿಗೆ 7 ಲಕ್ಷ 50 ಸಾವಿರ ಪರಿಹಾರ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ.ಮಂಜುನಾಥ ಅವರು ವಾದವನ್ನು ಮಂಡಿಸಿದ್ದು, ಸಾಕ್ಷಿದಾರರನ್ನು ಮಾನ್ಯ ನ್ಯಾಯಾಲಯಕ್ಕೆ ಸಮಯಕ್ಕೆ ಸರಿಯಾಗಿ ಪೊಲೀಸ್ ಪೇದೆಗಳಾದ ಬೂದೆಪ್ಪ ಮತ್ತು ಕೆಂಚಮ್ಮ ಅವರು ಕರೆತಂದು ಸಹಕರಿಸಿದ್ದಾರೆ.







