ರಾಯಚೂರು | ದೇವಸೂಗುರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಶಾಸಕ ಬಸನಗೌಡ ದದ್ದಲ್

ರಾಯಚೂರು : ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ದೇವಸೂಗುರ ಗ್ರಾಮದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಮಹರ್ಷಿ ವಾಲ್ಮೀಕಿ ಅಭಿವೃಧಿ ನಿಗಮದ ಅಧ್ಯಕ್ಷರು ಆಗಿರುವ ಶಾಸಕರಾದ ಬಸನಗೌಡ ದದ್ದಲ್ ಅವರು ನ.7ರಂದು ಉದ್ಘಾಟಿಸಿದರು.
ಸಿಎಸ್ ಆರ್ ಅನುದಾನದಡಿಯಲ್ಲಿ ನಿರ್ಮಿಸಲಾದ ದೇವಸೂಗೂರ ಗ್ರಾಮದ 2ನೇ ಮುಖ್ಯ ರಸ್ತೆಯಿಂದ ಶ್ರೀ ಸೂಗುರೇಶ್ವರ ದೇವಸ್ಥಾನದವರೆಗೆ ನಿರ್ಮಾಣಗೊಂಡ ಸಿಸಿ ರಸ್ತೆ, ವಿದ್ಯುತ್ ದೀಪಗಳ ವ್ಯವಸ್ಥೆ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕರು ಉದ್ಘಾಟಿಸಿದರು.
ಕೆಕೆಆರ್ ಡಿಬಿ ಮ್ಯಾಕ್ರೋ ಅನುದಾನದಡಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 4 ಹೆಚ್ಚುವರಿ ಕೊಠಡಿಗಳನ್ನು ಸಹ ಶಾಸಕರು ಉದ್ಘಾಟಿಸಿದರು.
ಪೂರ್ವಭಾವಿ ಸಭೆ :
ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಶಾಸಕರು ಮೊದಲಿಗೆ, ಗ್ರಾಮದಲ್ಲಿ ಆರಾಧ್ಯ ಕ್ಷೇತ್ರಾಧಿಪತಿ ಸುಕ್ಷೇತ್ರ ಸೂಗೂರೇಶ್ವರ ಸ್ವಾಮಿಯ ದರ್ಶನ ಆಶೀರ್ವಾದ ಪಡೆದುಕೊಂಡರು. ಬಳಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶಾಸಕರು ಪೂರ್ವಭಾವಿ ಸಭೆ ನಡೆಸಿ ನಾನಾ ಸಿದ್ಧತಾ ಕಾರ್ಯಗಳ ಬಗ್ಗೆ ಗ್ರಾಮಸ್ಥರು ಮತ್ತು ಅಧಿಕಾರಿಗಳು ಹಾಗು ಸಿಬ್ಬಂದಿಯೊಂದಿಗೆ ಚರ್ಚಿಸಿದರು.
ಜಾತ್ರಾ ಮಹೋತ್ಸವಕ್ಕೆ ನಮ್ಮ ರಾಜ್ಯ ಸೇರಿದಂತೆ ಸುತ್ತಲಿನ ನಾನಾ ರಾಜ್ಯದ ಭಕ್ತರು ಆಗಮಿಸಲ್ಲಿದ್ದು, ಎಲ್ಲರಿಗೂ ಕುಡಿಯುವ ನೀರು, ಪ್ರಸಾದ, ವಾಸ್ತವ್ಯ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಒದಗಿಸಲು ಒತ್ತು ನೀಡಿ, ಉತ್ತಮವಾಗಿ ಜಾತ್ರಾ ರಥೋತ್ಸವ ನೆರವೇರುವ ಕಾರ್ಯಗಳಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರು, ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.







