ರಾಯಚೂರು| ಬಂಗಾರಪ್ಪ ಕೆರೆಗೆ ಭೇಟಿ ನೀಡಿದ ಶಾಸಕ ಬಸನಗೌಡ ದದ್ದಲ್; ನೀರಿನ ಸಂಗ್ರಹ ಮಟ್ಟ ಪರಿಶೀಲನೆ

ರಾಯಚೂರು: ತಾಲೂಕಿನ ಕುಡಿಯುವ ನೀರು, ರೈತರ ಬೆಳೆಗಳಿಗೆ ಪ್ರಮುಖ ಆಧಾರವಾಗಿರುವ ಬಂಗಾರಪ್ಪ ಕೆರೆಗೆ ಗುರುವಾರ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಭೇಟಿ ನೀಡಿ, ಪ್ರಸ್ತುತ ನೀರಿನ ಸಂಗ್ರಹ ಮಟ್ಟ ಹಾಗೂ ಕೆರೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದರು.
ಈಗಾಗಲೇ ಸುಮಾರು 200 ಕೋಟಿ ರೂ ವೆಚ್ಚದಲ್ಲಿ ಕೃಷ್ಣ ನದಿಯಿಂದ ಏತನೀರಾವರಿ ಮೂಲಕ ಬಂಗಾರಪ್ಪ ಕೆರೆ ತುಂಬಿಸಿದ್ದು, ಪ್ರಸ್ತುತ ಕೆರೆಯಲ್ಲಿ 16 ಅಡಿ ನೀರಿನ ಸಂಗ್ರಹ ಲಭ್ಯವಿದ್ದು, ರೈತರ ಹಿತದೃಷ್ಟಿಯಿಂದ ಮೇಲ್ಭಾಗದ (ಅಪ್ಸ್ಟ್ರೀಮ್) ಹಾಗೂ ಕೆಳಭಾಗದ (ಡೌನ್ಸ್ಟ್ರೀಮ್) ಪ್ರದೇಶಗಳಿಗೆ ನೀರನ್ನು ಸಮಾನವಾಗಿ ಮತ್ತು ಸಮರ್ಪಕವಾಗಿ ಹಂಚಿಕೆ ಮಾಡುವುದು ಅತ್ಯಂತ ಅಗತ್ಯವಾಗಿದೆ. ವಿಶೇಷವಾಗಿ 98, 99, 99A, 100, 102 ಹಾಗೂ 102A ವಿತರಣಾ ಕಾಲುವೆಗಳ ವ್ಯಾಪ್ತಿಯ ರೈತರಿಗೆ ಸಮರ್ಪಕವಾಗಿ ನೀರು ತಲುಪುವಂತೆ ಕ್ರಮವಹಿಸುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.
ಇತ್ತೀಚಿನ ನೀರಾವರಿ ಸಲಹಾ ಸಮಿತಿ (ಐಸಿಸಿ ) ಸಭೆಯ ಸೂಚನೆಗಳ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಕೆಳಭಾಗದ ಪ್ರದೇಶಗಳಿಗೆ ಮತ್ತೊಮ್ಮೆ ನೀರು ಹರಿಸಲಾಗುವುದು. ನೀರಿನ ಹಂಚಿಕೆಯಲ್ಲಿ ಯಾವುದೇ ತಾರತಮ್ಯವಾಗದಂತೆ, ಎರಡೂ ಭಾಗಗಳ ರೈತರ ಹಿತಾಸಕ್ತಿಯನ್ನು ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದಲ್ಲದೆ, ಬಂಗಾರಪ್ಪ ಕೆರೆಯ ಬಲವರ್ಧನೆ, ರಕ್ಷಣೆ ಹಾಗೂ ದುರಸ್ತಿ ಕಾಮಗಾರಿಗಳನ್ನು ಅಂದಾಜು100 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಕಾಮಗಾರಿಗಳಿಂದ ಕೆರೆಯ ನೀರು ಸಂಗ್ರಹ ಸಾಮರ್ಥ್ಯವನ್ನು ಪ್ರಸ್ತುತ 1 ಟಿಎಂಸಿಯಿಂದ 2.5 ಟಿಎಂಸಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.
ಈ ಯೋಜನೆಯ ಮೊದಲ ಹಂತದಲ್ಲಿ 40 ಕೋಟಿ ಅನುದಾನ ಬಿಡುಗಡೆಯಾಗಿದ್ದು, ವಿವರವಾದ ಯೋಜನಾ ವರದಿ ಸಿದ್ಧವಾಗಿದೆ. ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಶೀಘ್ರವಾಗಿ ಪ್ರಾರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ರೈತರಿಗೆ ಸಮರ್ಪಕ ನೀರಿನ ಪೂರೈಕೆ, ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಿನ ಲಭ್ಯತೆ ಹಾಗೂ ಭವಿಷ್ಯದ ಕುಡಿಯುವ ನೀರಿನ ಭದ್ರತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಬಂಗಾರಪ್ಪ ಕೆರೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ರೈತರ ಹಿತವೇ ನಮ್ಮ ಆದ್ಯತೆ. ನೀರಿನ ಸಮರ್ಪಕ ಹಂಚಿಕೆ ಮತ್ತು ಕೆರೆಯ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದರು.






