ರಾಯಚೂರು | ಕೊತ್ತದೊಡ್ಡಿಯ ಏಕಲವ್ಯ ಮಾದರಿ ವಸತಿ ಶಾಲೆಗೆ ಸಂಸದ ಜಿ.ಕುಮಾರ ನಾಯಕ ದಿಢೀರ್ ಭೇಟಿ

ರಾಯಚೂರು: ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಗೆ ರಾಯಚೂರು-ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ.ಕುಮಾರ ನಾಯಕ ಅವರು ಅನಿರೀಕ್ಷಿತವಾಗಿ ಭೇಟಿ ನೀಡಿದರು.
ಸಂಸದರು ಶಾಲೆಯ ವಿದ್ಯಾರ್ಥಿಗಳೊಂದಿಗೆ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿ, ಶಾಲೆಯ ಕುಂದು-ಕೊರತೆಗಳನ್ನು ಆಲಿಸಿದರು. ಉತ್ತಮ ಮಟ್ಟದ ಬೋಧನೆ ಹಾಗೂ ವಿದ್ಯಾರ್ಥಿಗಳೊಂದಿಗೆ ಸ್ನೇಹಪೂರ್ಣವಾಗಿ ವರ್ತಿಸುವಂತೆ ಶಿಕ್ಷಕರಿಗೆ ಸೂಚನೆ ನೀಡಿದರು.
ಶಾಲೆಯಲ್ಲಿ 420 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಫಲಿತಾಂಶ ತರುವಂತೆ ಸಂಸದರು ಸಿಬ್ಬಂದಿಗೆ ಕರೆ ನೀಡಿದರು.
ಅಡುಗೆಮನೆಗೆ ತೆರಳಿದ ಅವರು, ಅಡುಗೆ ಸಿಬ್ಬಂದಿಗಳ ವೇತನ ಹಾಗೂ ತರಕಾರಿ, ಆಹಾರಧಾನ್ಯಗಳ ಗುಣಮಟ್ಟವನ್ನು ಪರಿಶೀಲಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಕುಳಿತು ಊಟ ಸೇವಿಸಿ, ಅಡುಗೆ ಗುಣಮಟ್ಟವನ್ನು ಖುದ್ದಾಗಿ ಪರಿಶೀಲಿಸಿದರು. ಮೆನು ಅನುಸರಿಸಿ, ಸ್ವಚ್ಛ ಹಾಗೂ ರುಚಿಕರ ಆಹಾರ ಒದಗಿಸಬೇಕು ಎಂದು ಅಡುಗೆ ಸಿಬ್ಬಂದಿಗೆ ಸೂಚಿಸಿದರು.
ಹಾಗೆಯೇ ಶುದ್ಧ ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ಪ್ರತ್ಯೇಕ ಬಾಲಕ-ಬಾಲಕಿಯರ ವಸತಿಗೃಹ ಮತ್ತು ಶೌಚಾಲಯಗಳ ಸ್ಥಿತಿಯನ್ನು ವೀಕ್ಷಿಸಿ, ಅವುಗಳನ್ನು ಸರಿಯಾಗಿ ನಿರ್ವಹಿಸುವಂತೆ ತಿಳಿಸಿದರು.
ವಿದ್ಯಾರ್ಥಿಗಳ ವೈಯಕ್ತಿಕ ಸಮಸ್ಯೆಗಳನ್ನೂ ಆಲಿಸಿ, ವಸತಿ ಶಾಲೆಗೆ ಬೇಕಾದ ಸಿಬ್ಬಂದಿ ನೇಮಕಾತಿಗೆ ಶೀಘ್ರವೇ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ರಾಜಶೇಖರ್ ನಾಯಕ, ತಾಲೂಕು ಪರಿಶಿಷ್ಟ ಕಲ್ಯಾಣಾಧಿಕಾರಿಗಳಾದ ಮಂಜುಳಾ, ನಿಲಯ ಪಾಲಕರಾದ ವಿಜಯಲಕ್ಷ್ಮಿ ಹಾಗೂ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







