ರಾಯಚೂರು | ಜಿಲ್ಲೆಯ 23 ಗ್ರಾಮಗಳಲ್ಲಿ ಮೊಹರಂ ಹಬ್ಬ ನಿಷೇಧ : ಜಿಲ್ಲಾಧಿಕಾರಿ ನಿತೀಶ್ ಕೆ.

ನಿತೀಶ್ ಕೆ.
ರಾಯಚೂರು : ಕ್ಷುಲಕ ಕಾರಣಗಳಿಂದ ಗಲಾಟೆಗಳು ಸಂಭವಿಸಿದ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯ 23 ಗ್ರಾಮಗಳಲ್ಲಿ ಮೊಹರಂ ಹಬ್ಬ ನಿಷೇಧಿಸಿಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಆದೇಶ ಹೊರಡಿಸಿದ್ದಾರೆ.
ಸಿಂಧನೂರು ಪೊಲೀಸ್ ಠಾಣೆ ವ್ಯಾಪ್ತಿಯ ಗಿಣಿವಾರ, ಅರಳಹಳ್ಳಿ, ಉಪ್ಪಳ, ಗೋರೆಬಾಳ ಹಾಗೂ ಗುಂಡಾ, ತುರ್ವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ನಿಡಿಗೊಳ-ತಿಡಿಗೋಳ, ಎಲೆಕೂಡ್ಲಿಗಿ, ಚಿಕ್ಕಬೇರಿ, ಮಾನ್ವಿ ಪೊಲೀಸ್ ಠಾಣೆಯ ವ್ಯಾಪ್ತಿಯ ನಂದಿಹಾಳ, ಜಾಗೀರ ಪನ್ನೂರು, ಜಾನೇಕಲ್ ಹಾಗೂ ಮದಾವೂರು, ಸಿರವಾರ ಪೊಲೀಸ್ ಠಾಣೆಯ ವ್ಯಾಪ್ತಿಯ ಸಿರವಾರ ಪಟ್ಟಣ, ಕಡದಿನ್ನಿ, ಬೊದ್ದುನಾಳ, ಕವಿತಾಳ ಪೊಲೀಸ್ ಠಾಣೆಯ ವ್ಯಾಪ್ತಿಯ ಕವಿತಾಳ ಪಟ್ಟಣ, ಹಿರೇ ಬಾದರದಿನ್ನಿ, ಬಾಗಲವಾಡ, ಅಮೀನಗಡ, ಗೊಗಬಾಳ, ಮಸ್ಕಿ ಪೊಲೀಸ್ ಠಾಣೆಯ ವ್ಯಾಪ್ತಿಯ ತಲೇಖಾನ್, ದೇವದುರ್ಗ ಪೊಲೀಸ್ ಠಾಣೆಯ ವ್ಯಾಪ್ತಿಯ ಖಾನಾಪೂರ, ಚಂಚೋಡಿ ಸೇರಿ 23 ಗ್ರಾಮಗಳಲ್ಲಿ ಶಾಂತಿ ಸುವ್ಯವಸ್ಥೆಗಾಗಿ ಮೊಹರಂ ನಿಷೇಧಿಸಲಾಗಿದೆ.
ಮೊಹರಂ ಹಬ್ಬ ಆಚರಣೆಯಲ್ಲಿ ವಿವಿಧ ಸಮುದಾಯಗಳ ಯುವಕರ ಮಧ್ಯೆ ಗಲಾಟೆಗಳಾಗಿ, ಹಲವು ಬಾರಿ ಹಳೆ ವೈಷಮ್ಯ ಉಂಟಾಗಿ ಪ್ರಕರಣಗಳು ದಾಖಲಾಗಿವೆ. ಗ್ರಾಮದಲ್ಲಿ ಜೀವ ಹಾನಿ ಹಾಗೂ ಆಸ್ತಿ ಪಾಸ್ತಿಗೆ ಹಾನಿಯಾಗುವ, ಕಾನೂನು ಸುವ್ಯವಸ್ಥೆ ಹದೆಗೆಡುವ ಸಂಭವ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕವಾಗಿ ಗುಂಪು ಗುಂಪಾಗಿ ಆಚರಿಸುವುದು ಹಾಗೂ ಸಾರ್ವಜನಿಕವಾಗಿ ಮೆರವಣಿಗೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.





