ರಾಯಚೂರು ಮಹಾನಗರ ಪಾಲಿಕೆಗೆ ರಾಜ್ಯಮಟ್ಟದ ಅತ್ಯುತ್ತಮ ಕಾರ್ಯಕ್ಷಮತೆ ಪ್ರಶಸ್ತಿ ಗರಿ

ರಾಯಚೂರು | ರಾಷ್ಟ್ರೀಯ ಜೀವನೋಪಾಯ ಅಭಿಯಾನ (DAY-NULM) ಅಡಿಯಲ್ಲಿ ಪ್ರಕಟಿಸಿದ ಕೌಶಲ ಕರ್ನಾಟಕ ಪ್ರಶಸ್ತಿಗೆ ರಾಯಚೂರು ಮಹಾನಗರ ಪಾಲಿಕೆ ಆಯ್ಕೆಯಾಗಿದೆ. ಈ ಪ್ರಶಸ್ತಿಯನ್ನು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಅವರಿಗೆ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಅತ್ಯುತ್ತಮ ಸಾಧನೆ ಮಾಡಿದ ಸ್ವಸಹಾಯ ಗುಂಪುಗಳ ಪ್ರಸ್ತಾವನೆಗಳನ್ನು ಪರಿಶೀಲಿಸಿದ ನಂತರ ಪ್ರಕಟಿಸಿದ ಪಟ್ಟಿಯಲ್ಲಿ, ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಕ್ಕಮಹಾದೇವಿ ಸ್ವಸಹಾಯ ಸಂಘ ಇಡೀ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿದೆ. ಈ ಪೈಕಿ ಮೊದಲ ಸ್ಥಾನವನ್ನು ಶಿವಮೊಗ್ಗ ಜಿಲ್ಲೆ ಮತ್ತು ಎರಡನೇ ಸ್ಥಾನವನ್ನು ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ಪಡೆದಿವೆ.
ಆಯುಕ್ತ ಜುಬಿನ್ ಮೊಹಪಾತ್ರ ಅವರು ಪ್ರತಿಕ್ರಿಯೆ ನೀಡಿ, ರಾಯಚೂರು ಮಹಾನಗರ ಪಾಲಿಕೆ ವೇಗವಾಗಿ ಬೆಳೆಯುತ್ತಿದೆ. ಸ್ವಸಹಾಯ ಸಂಘಗಳ ಚಟುವಟಿಕೆಗಳಿಗೆ ಪಾಲಿಕೆಯು ನೀಡಿದ ಉತ್ತೇಜನ, ಮಾರ್ಗದರ್ಶನ ಮತ್ತು ಬೆಂಬಲಕ್ಕೆ ಈ ಪ್ರಶಸ್ತಿ ಸಾಕ್ಷಿಯಾಗಿದೆ. ಅಕ್ಕಮಹಾದೇವಿ ಸ್ವಸಹಾಯ ಸಂಘದ ಕಾರ್ಯಗಳು ಇತರ ಸಂಘಗಳಿಗೆ ಸ್ಫೂರ್ತಿಯಾಗಲಿ ಎಂದು ಹೇಳಿದರು.





